ವಾಷಿಂಗ್ಟನ್, ಡಿಸಿ: ರಷ್ಯಾ-ಉಕ್ರೇನ್ ಸಂಘರ್ಷಕ್ಕೆ 2 ವರ್ಷಗಳು ಪೂರ್ಣಗೊಂಡಿವೆ. 3ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾದ ವಿರುದ್ಧ 500 ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ.
‘ಉಕ್ರೇನ್ ನಲ್ಲಿ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧಕ್ಕಾಗಿ ಹಾಗೂ ರಷ್ಯಾ ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಾಲ್ನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಾನು ರಷ್ಯಾದ ವಿರುದ್ಧ 500ಕ್ಕೂ ಹೆಚ್ಚು ಹೊಸ ನಿರ್ಬಂಧಗಳನ್ನು ಘೋಷಿಸುತ್ತಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ ಎಂದು ಶ್ವೇತಭವನದ ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ನಿರ್ಬಂಧಗಳು ನವಾಲ್ನಿ ಅವರ ಜೈಲುವಾಸಕ್ಕೆ ಸಂಬಂಧಿಸಿದ ವ್ಯಕ್ತಿಗಳು, ರಷ್ಯಾದ ಹಣಕಾಸು ವಲಯ, ಮಿಲಿಟರಿ ಕೈಗಾರಿಕಾ ನೆಲೆ, ಸಂಗ್ರಹಣೆ ಜಾಲಗಳು, ಭವಿಷ್ಯದ ಶಕ್ತಿ ಉತ್ಪಾದನೆ ಮತ್ತು ಅನೇಕ ವಲಯಗಳಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವವರಿಗೆ ಸಂಬಂಧಿಸಿದೆ.
‘ಉಕ್ರೇನ್ ನಲ್ಲಿ ತನ್ನ ಆಕ್ರಮಣಶೀಲತೆ ಮತ್ತು ಸ್ವದೇಶದಲ್ಲಿ ದಮನಕ್ಕೆ ಪುಟಿನ್ ಇನ್ನೂ ಕಠಿಣವಾದ ಬೆಲೆ ತೆರುವಂತೆ ಈ ನಿರ್ಬಂಧಗಳು ಮಾಡಲಿವೆ' ಎಂದು ಬೈಡನ್ ಹೇಳಿದ್ದಾರೆ.
‘ಉಕ್ರೇನ್ ನ ಕೆಚ್ಚೆದೆಯ ನಾಗರಿಕರು ತಮ್ಮ ಸ್ವಾತಂತ್ರ್ಯ ಹಾಗೂ ಭವಿಷ್ಯಕ್ಕಾಗಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಹೋರಾಡುತ್ತಿದ್ದಾರೆ. ನ್ಯಾಟೋ ಹಿಂದೆಂದಿಗಿಂತಲೂ ಪ್ರಬಲವಾಗಿದ್ದು, ಒಟ್ಟಾಗಿದೆ. ಅಮೆರಿಕ ನೇತೃತ್ವದಲ್ಲಿ ಉಕ್ರೇನ್ಗೆ ಬೆಂಬಲ ನೀಡುವ ಅಭೂತಪೂರ್ವ 50 ರಾಷ್ಟ್ರಗಳ ಜಾಗತಿಕ ಒಕ್ಕೂಟವು ಉಕ್ರೇನ್ ಗೆ ನೆರವು ನೀಡುವುದನ್ನು ಮುಂದುವರೆಸಲಿದೆ. ತನ್ನ ಆಕ್ರಮಣಕ್ಕೆ ರಷ್ಯಾವನ್ನು ಬೆಲೆ ತೆರುವಂತೆ ಮಾಡಲು ಅಮೆರಿಕ ಬದ್ಧವಾಗಿದೆ' ಎಂದು ಬೈಡನ್ ತಿಳಿಸಿದ್ದಾರೆ.
2022ರ ಫೆಬ್ರುವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.