ADVERTISEMENT

ಕೋವಿಡ್‌ ವಿರುದ್ಧದ ಹೋರಾಟ: ಅಮೆರಿಕದಿಂದ ಭಾರತಕ್ಕೆ ₹304 ಕೋಟಿ ನೆರವು

ಪಿಟಿಐ
Published 29 ಜೂನ್ 2021, 6:27 IST
Last Updated 29 ಜೂನ್ 2021, 6:27 IST
ಸಮಂತಾ ಪವರ್, ಯಎಸ್‌ಎಐಡಿ ಆಡಳಿತಾಧಿಕಾರಿ (ರಾಯಿಟರ್ಸ್‌– ಸಂಗ್ರಹ ಚಿತ್ರ)
ಸಮಂತಾ ಪವರ್, ಯಎಸ್‌ಎಐಡಿ ಆಡಳಿತಾಧಿಕಾರಿ (ರಾಯಿಟರ್ಸ್‌– ಸಂಗ್ರಹ ಚಿತ್ರ)   

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧದ ಹೋರಾಟ ಹಾಗೂ ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಬೇಕಾಗುವ ಸಿದ್ಧತೆಗಾಗಿ ಭಾರತಕ್ಕೆ ಹೆಚ್ಚುವರಿಯಾಗಿ ₹304 ಕೋಟಿ (41 ದಶಲಕ್ಷ ಡಾಲರ್) ಆರ್ಥಿಕ ಬೆಂಬಲವನ್ನು ಅಮೆರಿಕ ಪ್ರಕಟಿಸಿದೆ.

ಈ ಮೂಲಕ ಕೋವಿಡ್‌–19 ಸಾಂಕ್ರಾಮಿಕದ ಆರಂಭವಾದಾಗಿನಿಂದ ಇಲ್ಲಿವರೆಗೆ, ಅಮೆರಿಕ ಭಾರತಕ್ಕೆ ನೀಡಿರುವ ಒಟ್ಟು ಆರ್ಥಿಕ ನೆರವಿನ ಪ್ರಮಾಣ ₹1484 ಕೋಟಿ (200 ದಶಲಕ್ಷ ಡಾಲರ್‌)ಯಷ್ಟಾಗಿದೆ.

ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತ, ಕೋವಿಡ್‌ ಎರಡನೇ ಅಲೆ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿತು. ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆ ಎದುರಾಯಿತು.

‘ಇಂಥ ತುರ್ತು ಸಂದರ್ಭಗಳಲ್ಲಿ ಅಮೆರಿಕ ಭಾರತಕ್ಕೆ ನೆರವು ನೀಡಿತ್ತು. ಈಗಲೂ ಕೋವಿಡ್‌–19 ವಿರುದ್ಧದ ಭಾರತದ ಹೋರಾಟದಲ್ಲಿಅಮೆರಿಕ ನೆರವನ್ನು ಮುಂದುವರಿಸಿದೆ‘ ಎಂದು ಅಮೆರಿಕದ ಅಂತರರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಸೋಮವಾರ ತಿಳಿಸಿದೆ.

ಪ್ರಸ್ತುತ ಕೋವಿಡ್‌–19 ವಿರುದ್ಧದ ಹೋರಾಟ ಹಾಗೂ ಭವಿಷ್ಯದ ಆರೋಗ್ಯ ತುರ್ತುಪರಿಸ್ಥಿತಿ ಎದುರಿಸುವ ಸಿದ್ಧತೆಗಾಗಿ ಭಾರತಕ್ಕೆ ಹೆಚ್ಚುವರಿ₹304 ಕೋಟಿ ಆರ್ಥಿಕ ನೆರವು ನೀಡುತ್ತಿರುವುದಾಗಿ ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಎಐಡಿ) ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.