ADVERTISEMENT

ಅಮೆರಿಕದಲ್ಲಿ ಪ್ರಬಲ ಬಿರುಗಾಳಿಗೆ 19 ಜನರ ಸಾವು

ಮಧ್ಯ ಅಮೆರಿಕದ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ

ಏಜೆನ್ಸೀಸ್
Published 27 ಮೇ 2024, 14:04 IST
Last Updated 27 ಮೇ 2024, 14:04 IST
ಅಮೆರಿಕದ ಟೆಕ್ಸಾಸ್‌ನಲ್ಲಿ ಪ್ರಬಲ ಬಿರುಗಾಳಿಗೆ ಸಿಲುಕಿ ನಜ್ಜುಗುಜ್ಜಾಗಿರುವ ಕಾರುಗಳು 
ಅಮೆರಿಕದ ಟೆಕ್ಸಾಸ್‌ನಲ್ಲಿ ಪ್ರಬಲ ಬಿರುಗಾಳಿಗೆ ಸಿಲುಕಿ ನಜ್ಜುಗುಜ್ಜಾಗಿರುವ ಕಾರುಗಳು    

ಟೆಕ್ಸಾಸ್‌:ಅಮೆರಿಕದ ಮಧ್ಯ ಭಾಗದಲ್ಲಿರುವ ಟೆಕ್ಸಾಸ್‌, ಒಕ್ಲಹೋಮಾ ಮತ್ತು ಅರ್ಕಾನ್ಸಸ್‌ನಲ್ಲಿ ತೀವ್ರ ಹವಾಮಾನ ವೈಪರೀತ್ಯ ಉಂಟಾಗಿದ್ದು, ಶನಿವಾರ ರಾತ್ರಿ ಬೀಸಿದ ಪ್ರಬಲವಾದ ಸುಂಟರಗಾಳಿ ಮತ್ತು ಬಿರುಗಾಳಿಯಿಂದಾಗಿ ಕನಿಷ್ಠ 19 ಜನರು ಸಾವಿಗೀಡಾಗಿದ್ದಾರೆ. 

ಗಾಳಿಯ ರಭಸಕ್ಕೆ ಅನೇಕ ಮನೆಗಳು ಹಾನಿಗೊಳಗಾಗಿದ್ದು, ಬಹುತೇಕ ಕಡೆ ವಿದ್ಯುತ್‌ ಕಡಿತಗೊಂಡಿದೆ. ಟೆಕ್ಸಾಸ್‌ನ ಕೂಕ್‌ ಕೌಂಟಿಯಲ್ಲಿ ಏಳು ಜನ ಮೃತಪಟ್ಟಿದ್ದಾರೆ.

ಮೃತರಲ್ಲಿ ಎರಡು ಮತ್ತು ಐದು ವರ್ಷ ವಯಸ್ಸಿನ ಇಬ್ಬರು ಮಕ್ಕಳು ಮತ್ತು ಒಂದೇ ಕುಟುಂಬದ ಮೂವರು ಸೇರಿದ್ದಾರೆ. ನಾಪತ್ತೆಯಾಗಿರುವ ಹಲವರಿಗಾಗಿ ಭಾನುವಾರದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೂಕ್‌ ಕೌಂಟಿ ಶೆರಿಫ್‌ ರಾಯ್‌ ಸಪ್ಪಿಂಗ್ಟನ್‌ ಕಳವಳ ವ್ಯಕ್ತಪಡಿಸಿದ್ದಾರೆ. 

ADVERTISEMENT

ಶನಿವಾರದ ಭೀಕರ ಸುಂಟರಗಾಳಿಯಿಂದಾಗಿ 100 ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವುದು ಕಷ್ಟವಾಗಿದೆ. 200ಕ್ಕೂ ಹೆಚ್ಚು ಮನೆಗಳು ಹಾಗೂ ಇತರ ಅನೇಕ ಕಟ್ಟಡಗಳೂ ಹಾನಿಗೊಳಗಾಗಿವೆ ಎಂದು ಟೆಕ್ಸಾಸ್‌ ಗವರ್ನರ್‌ ಗ್ರೆಗ್‌ ಅಬಾಟ್‌ ತಿಳಿಸಿದ್ದಾರೆ. 

ಡೆಂಟನ್‌ ಕೌಂಟಿಯಲ್ಲಿ ಅನೇಕ ಗಾಯಾಳುಗಳನ್ನು ಹೆಲಿಕಾಪ್ಟರ್‌ ಹಾಗೂ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಗಳು ಹೇಳಿವೆ. ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುವ ‘ಮೊಬೈಲ್‌ ಮನೆಗಳು’ (ಹಗುರವಾದ ಸಣ್ಣ ಗಾತ್ರದ ಮನೆಗಳು) ಬಿರುಗಾಳಿಗೆ ಸಿಲುಕಿ ಸಂಪೂರ್ಣ ನಾಶವಾಗಿವೆ.

ಬಿರುಗಾಳಿಯು ಉತ್ತರ ಕೆರೊಲಿನಾ ಮತ್ತು ವರ್ಜೀನಿಯಾವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.