ADVERTISEMENT

ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನ ಪ್ರಕರಣ: ವಿಕಾಸ್ ವಿರುದ್ಧ ಚಾರ್ಜ್‌ಶೀಟ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:52 IST
Last Updated 18 ಅಕ್ಟೋಬರ್ 2024, 15:52 IST
ಗುರುಪತ್ವಂತ್‌ ಸಿಂಗ್‌ ಪನ್ನು
ಗುರುಪತ್ವಂತ್‌ ಸಿಂಗ್‌ ಪನ್ನು   

ವಾಷಿಂಗ್ಟನ್‌/ ನ್ಯೂಯಾರ್ಕ್: ಸಿಖ್‌ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿ ವಿಕಾಸ್‌ ಯಾದವ್‌ ವಿರುದ್ಧ ಅಮೆರಿಕದ ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

‘39 ವರ್ಷದ ವಿಕಾಸ್‌ ಯಾದವ್ ಅವರು ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್‌ ಆ್ಯಂಡ್‌ ಅನಲಿಸಿಸ್‌ ವಿಂಗ್’ನ (ರಾ) ಕಚೇರಿ ಒಳಗೊಂಡಿರುವ ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್‌ನ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.

‘ಪನ್ನು ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿರುವ ವ್ಯಕ್ತಿಯು ಭಾರತ ಸರ್ಕಾರದ ಉದ್ಯೋಗಿಯಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಗುರುವಾರ ನವದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಹತ್ಯೆ ಯತ್ನ ಪ್ರಕರಣದಲ್ಲಿ ಬಾಡಿಗೆ ಕೊಲೆಗಾರನನ್ನು ನೇಮಿಸಿದ ಮತ್ತು ಹಣ ಅಕ್ರಮ ವರ್ಗಾವಣೆಯ ಆರೋಪಗಳನ್ನು ಯಾದವ್‌ ಎದುರಿಸುತ್ತಿದ್ದಾರೆ. ‘ಯಾದವ್‌ ತಲೆಮರೆಸಿಕೊಂಡಿದ್ದಾರೆ’ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಈ ಪ್ರಕರಣದ ಸಹ–ಸಂಚುಕೋರ ನಿಖಿಲ್‌ ಗುಪ್ತಾ ಎಂಬಾತನನ್ನು ಕಳೆದ ವರ್ಷ ಜೆಕ್‌ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿತ್ತು. ಹಸ್ತಾಂತರದ ಬಳಿಕ ಆತ ಅಮೆರಿಕದ ಜೈಲಿನಲ್ಲಿದ್ದಾನೆ. 

‘ಅಮೆರಿಕನ್ನರನ್ನು ಗುರಿಯಾಗಿಸುವ ಮತ್ತು ಅವರನ್ನು ಅಪಾಯಕ್ಕೆ ಸಿಲುಕಿಸುವ ಪ್ರಯತ್ನಗಳನ್ನು ನ್ಯಾಯಾಂಗ ಇಲಾಖೆಯು ಸಹಿಸುವುದಿಲ್ಲ’ ಎಂಬುದನ್ನು ಈ ಚಾರ್ಜ್‌ಶೀಟ್‌ ತೋರಿಸುತ್ತದೆ ಎಂದು ಅಮೆರಿಕದ ಅಟಾರ್ನಿ ಜನರಲ್‌ ಮೆರಿಕ್ ಬಿ ಗಾರ್ಲ್ಯಾಂಡ್‌ ಹೇಳಿದ್ದಾರೆ.

‘ಪ್ರತಿವಾದಿಯಾಗಿರುವ ಭಾರತ ಸರ್ಕಾರದ ಉದ್ಯೋಗಿ, ತನ್ನ ಸಹವರ್ತಿಯೊಂದಿಗೆ ಕ್ರಿಮಿನಲ್ ಸಂಚು ರೂಪಿಸಿ ಅಮೆರಿಕ ನೆಲದಲ್ಲಿ ಅಮೆರಿಕದ ಪ್ರಜೆಯೊಬ್ಬರ ಹತ್ಯೆಗೆ ಪ್ರಯತ್ನಿಸಿದ್ದಾರೆ’ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್‌ ರೇ ಹೇಳಿದ್ದಾರೆ.

ಪನ್ನು ಹತ್ಯೆ ಯತ್ನ ಸಂಚಿನಲ್ಲಿ ತನ್ನ ಪಾತ್ರವನ್ನು ಭಾರತ ಸರ್ಕಾರ ಈಗಾಗಲೇ ನಿರಾಕರಿಸಿದೆ. ಅಮೆರಿಕದ ಆರೋಪದ ನಂತರ ಭಾರತವು ಈ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ರಚಿಸಿತ್ತು. ತನಿಖೆಗೆ ಭಾರತ ನೀಡುತ್ತಿರುವ ಸಹಕಾರದ ಬಗ್ಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ. ‘ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು’ ಎಂದು ಆರೋಪಿಸಿ, ಪನ್ನೂ ದಾಖಲಿಸಿರುವ ದಾವೆಗೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೂ ಪನ್ನು ಹತ್ಯೆ ಯತ್ನ ಪ್ರಕರಣಕ್ಕೂ ನಂಟು ಇದೆ ಎಂಬ ಅಂಶವೂ ದೋಷಾರೋಪ ಪಟ್ಟಿಯಲ್ಲಿದೆ.

‘₹ 84 ಲಕ್ಷ ಸುಪಾರಿ’

‘ಯಾದವ್‌ ಅವರು ಸಹ–ಸಂಚುಕೋರ ನಿಖಿಲ್‌ ಗುಪ್ತಾ ಜತೆ 2023ರ ಬೇಸಿಗೆಯಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ಸಂಚು ಹೂಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಕೊಲೆ ಕೃತ್ಯ ನಡೆಸಲು ಗುಪ್ತಾ ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು. ಆ ಅಪರಿಚಿತ ವ್ಯಕ್ತಿ ಈ ಕೆಲಸಕ್ಕಾಗಿ 1 ಲಕ್ಷ ಅಮೆರಿಕನ್‌ ಡಾಲರ್‌ (ಸುಮಾರು ₹ 84 ಲಕ್ಷ) ನೀಡುವಂತೆ ಬೇಡಿಕೆಯಿಟ್ಟಿದ್ದರು. 2023ರ ಜೂನ್‌ 9ರಂದು ಮುಂಗಡವಾಗಿ 15 ಸಾವಿರ ಡಾಲರ್ (ಸುಮಾರು ₹12 ಲಕ್ಷ) ಪಡೆದುಕೊಂಡಿದ್ದರು’ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಿದೆ. ಸೇನಾ ಸಮವಸ್ತ್ರದಲ್ಲಿರುವ ಯಾದವ್‌ ಅವರ ಚಿತ್ರವನ್ನೂ 18 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಲಗತ್ತಿಸಲಾಗಿದೆ. ಗುಪ್ತಾ ಮತ್ತು ಯಾದವ್‌ ಅವರು ನೇಮಿಸಿರುವ ಬಾಡಿಗೆ ಕೊಲೆಗಾರನಿಗೆ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ಹಣ ನೀಡುತ್ತಿರುವ ಚಿತ್ರವೂ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.