ADVERTISEMENT

ಬಾಲಕಿಯರ ಶಾಲೆ ಮುಚ್ಚಲು ಆದೇಶ: ತಾಲಿಬಾನ್‌ನೊಂದಿಗಿನ ಸಭೆ ರದ್ದುಗೊಳಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 10:00 IST
Last Updated 26 ಮಾರ್ಚ್ 2022, 10:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬುಲ್: ಅಪ್ಗಾನಿಸ್ತಾನದಲ್ಲಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ತರಗತಿಗೆ ಮರಳಲು ಅವಕಾಶ ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡ ಬಳಿಕ, ದೋಹಾದಲ್ಲಿ ತಾಲಿಬಾನ್‌ನೊಂದಿಗೆ ನಡೆಯಬೇಕಿದ್ದ ಸಭೆಗಳನ್ನು ಅಮೆರಿಕ ದಿಢೀರನೆ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾತುಕತೆ ರದ್ದತಿಯು ಮಾನವ ಹಕ್ಕುಗಳು ಮತ್ತು ನೀತಿಗಳ ಮೇಲಿನ ತಾಲಿಬಾನ್‌ನ ಇತ್ತೀಚಿನ ನಡೆಗಳು ಅಪ್ಗಾನಿಸ್ತಾನಕ್ಕೆ ಸಹಾಯ ಮಾಡುವ ಅಂತರರಾಷ್ಟ್ರೀಯ ಸಮುದಾಯದ ಇಚ್ಛೆಯ ಮೇಲೆ ನೇರ ಪರಿಣಾಮ ಬೀರಿರುವ ಕುರುಹಾಗಿದೆ. ಈಗಾಗಲೇ ತಾಲಿಬಾನ್‌ನ ಕೆಲವು ನಾಯಕರು ಅಮೆರಿಕದಿಂದ ನಿರ್ಬಂಧ ಎದುರಿಸುತ್ತಿದ್ದಾರೆ.

'ತಾಲಿಬಾನ್ ನಿರ್ಧಾರದಿಂದಾಗಿ ಅಫ್ಗಾನಿಸ್ತಾನದ ಜನರಿಗೆ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ನಿರಾಸೆ ಹಾಗೂ ವಿವರಿಸಲಾಗದ ಬದ್ಧತೆಯ ಹಿನ್ನಡೆಯಾಗಿದೆ' ಎಂದು ಅಮೆರಿಕದ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ADVERTISEMENT

'ದೋಹಾದಲ್ಲಿ ನಡೆಯಬೇಕಿದ್ದ ಯೋಜಿತ ಸಭೆಗಳು ಸೇರಿದಂತೆ ನಮ್ಮ ಕೆಲವು ಮಾತುಕತೆಗಳನ್ನು ನಾವು ರದ್ದುಗೊಳಿಸಿದ್ದೇವೆ ಮತ್ತು ಈ ನಿರ್ಧಾರವನ್ನು ನಮ್ಮ ಬದ್ಧತೆಯಲ್ಲಿ ದೊರೆತ ಸಂಭಾವ್ಯ ತಿರುವು ಎಂದು ನಾವು ನೋಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ಕತಾರ್‌ನ ರಾಜಧಾನಿಯಲ್ಲಿ ನಡೆಯಬೇಕಿದ್ದ ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಮತ್ತು ತಾಲಿಬಾನ್ ಆಡಳಿತದ ಅಧಿಕಾರಿಗಳ ನಡುವಿನ ಸರಣಿ ಸಭೆ ನಡೆಸಲು ನಿರ್ಧರಿಸಲಾಗಿತ್ತು ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಕೆಲವು ಸಭೆಗಳಲ್ಲಿ ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್ ಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಲಿ ವಿದೇಶಾಂಗ ಸಚಿವರು ಸೇರಿದಂತೆ ತಾಲಿಬಾನ್ ನಿಯೋಗವು ದೋಹಾಗೆ ಹೋಗುವ ನಿರೀಕ್ಷೆಯಲ್ಲಿದೆ ಎಂದು ಅಫ್ಗಾನಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಖಚಿತಪಡಿಸಿದ್ದರು.

ಅಫ್ಗಾನಿಸ್ತಾನದಲ್ಲಿ ಬಾಲಕಿಯರ ಪ್ರೌಢಶಾಲೆಗಳು ಪುನಃ ತೆರೆದ ಕೆಲವೇ ಗಂಟೆಗಳ ನಂತರ ಮತ್ತೆ ಶಾಲೆಗಳನ್ನು ಮುಚ್ಚುವಂತೆ ಬುಧವಾರ (ಮಾ.23) ತಾಲಿಬಾನ್ ಆದೇಶಿಸಿತ್ತು. ಬಾಲಕಿಯರು ಮನೆಗೆ ತೆರಳಲು ಸೂಚಿಸಿರುವ ವರದಿಗಳು ನಿಜವೇ ಎಂದು ಪ್ರಶ್ನಿಸಿದ ಎಎಫ್‌ಪಿಗೆ ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿ, 'ಹೌದು ಇದು ನಿಜ' ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.