ತೈಪೆ: ತೈವಾನ್ ಸ್ವಾಧೀನಕ್ಕೆ ಚೀನಾದ ಸೇನೆ ಬೆದರಿಕೆ ಮುಂದುವರಿಸಿರುವ ಬೆನ್ನಲ್ಲೇ ತೈವಾನ್ ಕೂಡ ಗುರುವಾರ ಮತ್ತೊಂದು ‘ಲೈವ್ ಫೈರ್’ ಸೇನಾ ತಾಲೀಮು ನಡೆಸಿತು.
ದೇಶದ ದಕ್ಷಿಣದ ಪಿಂಗ್‌ಟಂಗ್‌ನಲ್ಲಿ ಗುರುವಾರ ಬೆಳಿಗ್ಗೆ 8.30ಕ್ಕೆ ಸೇನಾ ತಾಲೀಮು ಆರಂಭವಾಯಿತು. ರಕ್ಷಣಾತ್ಮಕ ತಾಲೀಮಿನ ಭಾಗವಾಗಿ ಹೋವಿಟ್ಜರ್‌ಗಳು ಮತ್ತು ನಿರ್ದಿಷ್ಟ ಗುರಿ ಧ್ವಂಸಗೊಳಿಸುವ ಫಿರಂಗಿಗಳಿಂದ ಜೀವಂತ ಮದ್ದುಗುಂಡುಗಳನ್ನುಸಿಡಿಸಲಾಯಿತು. ಸಾಗರದ ಕಡೆಯಿಂದ ಎದುರಾಗುವ ಶತ್ರುದಾಳಿಯನ್ನು ತಡೆಯುವ ತಾಲೀಮನ್ನೂ ಶಸಸ್ತ್ರಪಡೆ ಯೋಧರು ನಡೆಸಿದರು ಎಂದುತೈವಾನ್ 8ನೇ ಸೇನಾ ತುಕಡಿಯ ವಕ್ತಾರರು ತಿಳಿಸಿದರು.
ಇದೇ ರೀತಿಯ ತಾಲೀಮನ್ನು ತೈವಾನ್ ಸೇನೆ ಮಂಗಳವಾರವಷ್ಟೇ ನಡೆಸಿತ್ತು. ‘ಈ ತಾಲೀಮು ಚೀನಾದ ಯುದ್ಧತಂತ್ರಕ್ಕೆ ಪ್ರತಿಕ್ರಿಯೆಯಲ್ಲ, ಇವು ಪೂರ್ವ ನಿಗದಿತ ತಾಲೀಮುಗಳು. ಚೀನಾ ಆಕ್ರಮಣ ತಡೆಯಲು ತೈವಾನ್ ವಾಡಿಕೆಯಂತೆ ಸೇನಾ ತಾಲೀಮು ನಡೆಸುತ್ತದೆ’ ಎಂದು ತೈವಾನ್ ಸೇನೆ ಹೇಳಿದೆ.
‘ಒಂದೇ ದೇಶ, ಎರಡು ವ್ಯವಸ್ಥೆ’ ತಿರಸ್ಕರಿಸಿದ ತೈವಾನ್:ತೈವಾನ್‌ನ ಸ್ವಯಂ ಆಡಳಿತದ ಸ್ವಾಯತ್ತತೆ ಹಿಂಪಡೆದಿರುವ ಚೀನಾ, ಹೊಸ ಶ್ವೇತಪತ್ರ ಹೊರಡಿಸಿದ್ದು, ಇದರಲ್ಲಿ ಪ್ರಸ್ತಾಪಿಸಿರುವ ‘ಒಂದೇ ದೇಶ, ಎರಡು ವ್ಯವಸ್ಥೆ’ಯನ್ನು ತೈವಾನ್ ಸರ್ಕಾರ ಗುರುವಾರ ಸಾರಾಸಗಟಾಗಿ ತಿರಸ್ಕರಿಸಿದೆ.
‘ಚೀನಾದ ಈ ಹೊಸ ಪ್ರಸ್ತಾವ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಇದು ಗಡಿ ಯಥಾಸ್ಥಿತಿಗೆ ಸಂಪೂರ್ಣ ವಿರುದ್ಧವಾಗಿದೆ. ದೇಶದ ಭವಿಷ್ಯ ನಿರ್ಧರಿಸುವ ಹಕ್ಕು ತೈವಾನ್ ಪ್ರಜೆಗಳಿಗೆ ಮಾತ್ರ ಇದೆ’ ಎಂದು ತೈವಾನ್ ವಿದೇಶಾಂಗ ಸಚಿವಾಲಯದ ವಕ್ತಾರೆ ಜೋಹಾನ್ ಒಯು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತೈವಾನ್ ಮೇಲೆ ಆಕ್ರಮಣದ ಯೋಜನೆ ಹೊಂದಿರುವ ಚೀನಾ ಸಮರಾಭ್ಯಾಸಕ್ಕೆ ಪೆಲೋಸಿ ಅವರ ತೈಪೆ ಭೇಟಿಯನ್ನು ಒಂದು ನೆಪವಾಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
‘ತೈವಾನ್ ಅನ್ನು ಚೀನಾದ ಭಾಗವಾಗಿ ಎಂದಿಗೂ ಪರಿಗಣಿಸುವುದಿಲ್ಲ’ ಎಂದು ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಮತ್ತು ಅವರ ಪ್ರಜಾಸತ್ತಾತ್ಮಕ ಪ್ರಗತಿಪರ ಪಕ್ಷ ಸ್ಪಷ್ಟವಾಗಿ ಹೇಳಿದೆ.
ತೈವಾನ್‌ನಲ್ಲಿ ಚೀನಾದ ‘ನ್ಯೂ ನಾರ್ಮಲ್’ಗೆ ಅಮೆರಿಕ ಆಸ್ಪದ ಕೊಡದು: ಪೆಲೋಸಿ
ವಾಷಿಂಗ್ಟನ್: ಪ್ರಜಾಪ್ರಭುತ್ವದ ರಾಷ್ಟ್ರ ತೈವಾನ್‌ನಲ್ಲಿ ಚೀನಾ ಅಧಿಕಾರ ಸ್ಥಾಪನೆಗೆ (ನ್ಯೂನಾರ್ಮಲ್) ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಏಷ್ಯಾ ಪ್ರವಾಸದ ನಂತರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವಾರ ತೈವಾನ್‌ಗೆ ತಾವು ಭೇಟಿ ನೀಡಿದ್ದನ್ನು ವಿರೋಧಿಸಿದ ಚೀನಾ, ಪ್ರತೀಕಾರವಾಗಿ ತೈವಾನ್ ಜಲಸಂಧಿಯಲ್ಲಿ ಸಮರಾಭ್ಯಾಸ ನಡೆಸಿ, ದ್ವೀಪದ ಸ್ವಾಧೀನಕ್ಕೆ ಸೇನೆ ಬಳಸುವುದಾಗಿ ಎಚ್ಚರಿಸಿದೆ. ಚೀನಾದ ಪ್ರತಿ ನಡೆಯನ್ನುನಾವು ಗಮನಿಸುತ್ತಿದ್ದೇವೆ. ಚೀನಾದ ‘ನ್ಯೂನಾರ್ಮಲ್’ ಪ್ರಯತ್ನಕ್ಕೆ ಅಮೆರಿಕ ಆಸ್ಪದ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ನಾವು ಚೀನಾದ ಬಗ್ಗೆ ಚರ್ಚಿಸಲು ತೈಪೆಗೆ ಹೋಗಿರಲಿಲ್ಲ. ತೈವಾನ್ ಪ್ರಶಂಸಿಸಲು ಹೋಗಿದ್ದೆವು. ಜಾಗತಿಕ ಸಮುದಾಯದಿಂದತೈವಾನ್ ಅನ್ನು ಪ್ರತ್ಯೇಕಿಸಲು ಚೀನಾಕ್ಕೆ ಅಸಾಧ್ಯವೆಂಬುದನ್ನು ಬಲವಾಗಿ ಪ್ರತಿಪಾದಿಸಲು ಮತ್ತು ನಮ್ಮ ಸ್ನೇಹ ಸಂಬಂಧ ತೋರಿಸಲು ಭೇಟಿ ನೀಡಿದ್ದೇವೆ’ ಎಂದು ಪೆಲೋಸಿ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.