ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ 2021ರ ಜನವರಿ 6ರಂದು ನಡೆದಿದ್ದ ಕ್ಯಾಪಿಟಲ್ ಹಿಲ್ಸ್ ದಾಳಿಯು ಆಕಸ್ಮಿಕವಾಗಿರಲಿಲ್ಲ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ದಂಗೆಯ ಪ್ರಯತ್ನವಾಗಿತ್ತು ಎಂದು ಘಟನೆಯ ತನಿಖೆ ನಡೆಸುತ್ತಿರುವ ‘ಅಮೆರಿಕ ಕಾಂಗ್ರೆಸ್ ಸಮಿತಿ’ ಹೇಳಿದೆ.
‘ಜನವರಿ 6ರಂದು ನಡೆದಿದ್ದ ದಾಳಿಯು ದಂಗೆ ಪ್ರಯತ್ನವಾಗಿತ್ತು. ಹಿಂಸಾಚಾರವು ಆಕಸ್ಮಿಕವಾಗಿರಲಿಲ್ಲ. ಅದು ಡೊನಾಲ್ಡ್ ಟ್ರಂಪ್ ಅವರ ಕೊನೆಯ ಅಸ್ತ್ರವಾಗಿತ್ತು. ದಂಗೆ ಏಳುವಂತೆ ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆ ಕೊಟ್ಟಿದ್ದರು’ ಎಂದು ಸಮಿತಿಯ ಉಪಾಧ್ಯಕ್ಷ ಲಿಜ್ ಚೆನಿ ಹೇಳಿದ್ದಾರೆ.
ಕ್ಯಾಪಿಟಲ್ ದಾಳಿಗೆ ಸಂಬಂಧಿಸಿದಂತೆ ತನಿಖಾ ಸಮಿತಿಯು 1,000ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್ ಆರೋಪವನ್ನು ಒಪ್ಪುವುದಿಲ್ಲ ಎಂದು ಸ್ವತಃ ಪುತ್ರಿ ಇವಾಂಕಾ ಟ್ರಂಪ್ ಅವರೂ ಇದೇ ತನಿಖಾ ಸಮಿತಿ ಮುಂದೆ ಹೇಳಿದ್ದಾರೆ.
ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಹಿಲ್ಸ್‌ಗೆ ಮಹತ್ವದ ಸ್ಥಾನವಿದೆ. ‘ಯುಎಸ್ ಕ್ಯಾಪಿಟಲ್’ ಎಂಬ ಹೆಸರಿನ ಸಂಸತ್ ಭವನದ ಜತೆಗೆ ಅಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಹಲವು ಕಟ್ಟಡಗಳು ಇಲ್ಲಿ ಇವೆ. ಈ ಕಟ್ಟಡದ ಮೇಲೆ 2021ರ ಜನವರಿ 6ರಂದು ದಾಳಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.