ವಾಷಿಂಗ್ಟನ್: ‘ಕರ್ನಾಟಕ ಸಂಗೀತದ ಅನನ್ಯ ಸಾಧಕಿ ಅವಸರಾಲ ಕನ್ಯಾಕುಮಾರಿ ಅವರು ಸಂಗೀತ ಕ್ಷೇತ್ರದ ರಾಯಭಾರಿಯೇ ಆಗಿದ್ದಾರೆ’ ಎಂದು ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
ಸಂಸತ್‌ನ ಕೆಳಮನೆಯಲ್ಲಿ ಮಾತನಾಡಿದ ಅವರು, ‘ಕನ್ಯಾಕುಮಾರಿ ಅವರು ಪಿಟೀಲು ನುಡಿಸುವ ಕ್ಷೇತ್ರದ ಅದ್ಭುತ ಪ್ರತಿಭೆ. ಅವರ ಪ್ರತಿಭೆಗೆ ವಿಶ್ವವೇ ತಲೆದೂಗಿದೆ. ಕರ್ನಾಟಕ ಸಂಗೀತ ಪರಂಪರೆಯ ಶ್ರೇಷ್ಥತೆಯನ್ನು ಅವರು ಜಗತ್ತಿಗೇ ತೋರಿಸಿಕೊಟ್ಟಿದ್ಧಾರೆ’ ಎಂದು ಶ್ಲಾಘಿಸಿದರು.
‘ಕರ್ನಾಟಕ ಸಂಗೀತದಲ್ಲಿ ಮುಂದಿನ ಪೀಳಿಗೆಯನ್ನು ತಯಾರು ಮಾಡಬೇಕು ಎಂಬ ಅವರ ಬದ್ಧತೆ ಇತರರಿಗೆ ಮಾದರಿ. ಯಾವುದೇ ಫಲಾಪೇಕ್ಷೆ ಇಲ್ಲದೇ, ಈ ಕಲೆಯನ್ನು ಉಚಿತವಾಗಿ ಕಲಿಸಿಕೊಡುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಗುರುವೃಂದವನ್ನು ಗೌರವಿಸುತ್ತಿದ್ದಾರೆ’ ಎಂದೂ ಹೇಳಿದರು.
‘ಅವರ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ ಕನ್ಯಾಕುಮಾರಿ ಅವರಿಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ತಮಿಳುನಾಡು ಸರ್ಕಾರ ‘ಕಲೈಮಣಿ ಪ್ರಶಸ್ತಿ’, ಮದ್ರಾಸ್ ಸಂಗೀತ ಅಕಾಡೆಮಿ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.