ADVERTISEMENT

ಮುಂಬೈ ದಾಳಿ ಆರೋಪಿ ತಹಾವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಕೋರ್ಟ್‌ ಒಪ್ಪಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2023, 2:47 IST
Last Updated 18 ಮೇ 2023, 2:47 IST
ತಹಾವ್ವುರ್ ರಾಣಾ
ತಹಾವ್ವುರ್ ರಾಣಾ   

ವಾಷಿಂಗ್ಟನ್: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ ಪ್ರಕರಣದಲ್ಲಿ ಬೇಕಾಗಿರುವ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅಮೆರಿಕ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.

ಮುಂಬೈ ಪ್ರಕರಣದ ಸಂಬಂಧ ಈತನನ್ನು ಒಪ್ಪಿಸಬೇಕು ಎಂದು ಭಾರತ ಕೋರಿತ್ತು. ಈ ಸಂಬಂಧ ಕಳೆದ ವರ್ಷ ಜೂನ್‌ 10ರಂದು ಈತನನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ಈತ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ಘೋಷಿಸಿದೆ. 2008ರಲ್ಲಿ ನಡೆದಿದ್ದ ಕೃತ್ಯದಲ್ಲಿ ಅಮೆರಿಕದ ಎಂಟು ಮಂದಿ ಸೇರಿ 166 ಜನ ಮೃತಪಟ್ಟಿದ್ದರು.

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿರುವ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ಕಡೆಯದಾಗಿ ಈ ಪ್ರಕರಣದ ವಿಚಾರಣೆ ಜೂನ್‌ 2021ರಲ್ಲಿ ನಡೆದಿತ್ತು. ರಾಣಾನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಅಮೆರಿಕ ಸರ್ಕಾರವು ಮನವಿ ಮಾಡಿದ್ದು, ಕೋರ್ಟ್ ಈ ಸಂಬಂಧ ತನ್ನ ಆದೇಶವನ್ನು ಇಲ್ಲಿಯವರೆಗೂ ಪ್ರಕಟಿಸಿರಲಿಲ್ಲ.

ADVERTISEMENT

ಇದೀಗ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅನುಮತಿ ನೀಡಿ ಕೋರ್ಟ್‌ ಅದೇಶ ಮಾಡಿದೆ. 

ಲಾಸ್ ಏಂಜಲೀಸ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಜಾಕ್ವೆಲಿನ್ ಚೂಲಿಜಿಯನ್‌ ಅವರು 62 ವರ್ಷದ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅನುಮತಿ ನೀಡಿದೆ ಎಂದು ಹೇಳಿದ್ದಾರೆ. 

2008ರ ನವೆಂಬರ್ 26ರಂದು ಮುಂಬೈ ಮೇಲೆ ಲಷ್ಕರ್‌–ಎ–ತಯಬಾ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 6 ಅಮೆರಿಕನ್ನರು ಸೇರಿ 166 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.