ADVERTISEMENT

ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿದ್ದ ರಾಣಾ ಅರ್ಜಿ ವಜಾಗೊಳಿಸಿದ ಅಮೆರಿಕ ಕೋರ್ಟ್‌

ಮುಂಬೈ ಮೇಲೆ ಉಗ್ರರ ದಾಳಿ ಪ್ರಕರಣದ ಆರೋಪಿ

ಪಿಟಿಐ
Published 18 ಆಗಸ್ಟ್ 2023, 16:15 IST
Last Updated 18 ಆಗಸ್ಟ್ 2023, 16:15 IST
ರಾಣಾ
ರಾಣಾ   

ವಾಷಿಂಗ್ಟನ್: 2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ಆದೇಶವನ್ನು ಪ್ರಶ್ನಿಸಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ವುರ್ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ನ್ಯಾಯಾಲಯ ವಜಾಗೊಳಿಸಿದೆ.

ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಅವರು ಒಪ್ಪಿಗೆ ನೀಡಲು ಈಗ ದಾರಿ ಸುಗಮವಾಗಲಿದೆ.

62 ವರ್ಷದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಅಮೆರಿಕದ ಕೋರ್ಟ್‌ ಕಳೆದ ಮೇನಲ್ಲಿ ಅನುಮೋದನೆ ನೀಡಿ ಆದೇಶಿಸಿತ್ತು. ಮುಂಬೈ ಮೇಲೆ ದಾಳಿ ಪ್ರಕರಣದ ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕಾಗಿ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಂದ ದೊಡ್ಡ ಗೆಲುವು ಎಂದು ವಿಶ್ಲೇಷಿಸಲಾಗಿತ್ತು.

ADVERTISEMENT

ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೂನ್‌ನಲ್ಲಿ ರಾಣಾ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ್ದ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡೇಲ್ ಎಸ್‌.ಫಿಷರ್ ಅವರು, ರಾಣಾ ಅರ್ಜಿಯನ್ನು ವಜಾಗೊಳಿಸಿ ಆಗಸ್ಟ್‌ 10ರಂದು ಆದೇಶಿಸಿದ್ದಾರೆ.

ರಾಣಾನನ್ನು ಹಸ್ತಾಂತರಿಸುವುದಕ್ಕೆ ಸಂಬಂಧಿಸಿ 2020ರ ಜೂನ್‌ 10ರಂದು ಭಾರತವು ಮನವಿ ಸಲ್ಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.