ADVERTISEMENT

ಆರೋಪಗಳ ವಜಾ ಕೋರಿದ್ದ ನೀರವ್ ಮೋದಿ, ಸಹಚರರ ಅರ್ಜಿ ತಿರಸ್ಕಾರ

ಪಿಟಿಐ
Published 19 ಅಕ್ಟೋಬರ್ 2021, 6:14 IST
Last Updated 19 ಅಕ್ಟೋಬರ್ 2021, 6:14 IST
ನೀರವ್‌ ಮೋದಿ
ನೀರವ್‌ ಮೋದಿ   

ವಾಷಿಂಗ್ಟನ್‌: ತಮ್ಮ ವಿರುದ್ಧ ಹೊರಿಸಲಾದ ವಂಚನೆ ಆರೋಪಗಳನ್ನು ವಜಾ ಮಾಡಬೇಕು ಎಂದು ಕೋರಿ ಉದ್ಯಮಿ ನೀರವ್‌ ಮೋದಿ ಮತ್ತು ಅವರ ಇಬ್ಬರು ಸಹಚರರು ಸಲ್ಲಿಸಿದ್ದ ಅರ್ಜಿಗಳನ್ನು ದಿವಾಳಿ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸುವ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ. ನೀರವ್ ಮೋದಿ ಮತ್ತು ಸಹಚರರು ಈ ಹಿಂದೆ ಪರೋಕ್ಷವಾಗಿ ಮಾಲೀಕತ್ವ ಹೊಂದಿದ್ದ ಮೂರು ಕಂಪನಿಗಳಿಗೆ ನೇಮಕವಾಗಿದ್ದ ಪ್ರವರ್ತಕರು ಈ ಆರೋಪ ಹೊರಿಸಿದ್ದರು.

50 ವರ್ಷದ ಮೋದಿ ಪರೋಕ್ಷವಾಗಿ ಮಾಲೀಕತ್ವ ಹೊಂದಿದ್ದ ಕಂಪನಿಗಳಾದ –ಫೈರ್‌ಸ್ಟಾರ್ ಡೈಮಂಡ್, ಫ್ಯಾಂಟಸಿ ಐಎನ್‌ಸಿ, ಎ ಜ್ಯಾಫೆ–ಗೆ ಟ್ರಸ್ಟಿ ಆಗಿ ಕೋರ್ಟ್‌ ನೇಮಕ ಮಾಡಿದ್ದ ರಿಚರ್ಡ್‌ ಲೆವಿನ್ ಅವರು ನ್ಯೂಯಾರ್ಕ್‌ನ ಕೋರ್ಟ್‌ನಲ್ಲಿ ಈ ಕುರಿತು ಆರೋಪ ಹೊರಿಸಿದ್ದರು.

ನೀರವ್ ಮೋದಿ ಮತ್ತವರ ಸಹಚರರಾದ ಮಿಹಿರ್‌ ಬನ್ಸಾಲಿ, ಅಜಯ್‌ ಗಾಂಧಿ ಅವರಿಂದ, ಸಾಲ ನೀಡಿದ್ದವರಿಗೆ ಪರಿಹಾರವಾಗಿ ಕನಿಷ್ಠ 15 ಮಿಲಿಯನ್‌ ಡಾಲರ್ (ಸುಮಾರು ₹ 112 ಕೋಟಿ) ಪರಿಹಾರ ಕೊಡಿಸಬೇಕು ಎಂದು ಲೆವಿನ್‌ ಅವರು ಕೋರಿದ್ದರು.

ADVERTISEMENT

ನ್ಯಾಯಮೂರ್ತಿ ಸೀನ್‌ ಎಚ್ ಲೇನ್‌ ಅವರು ಈ ಕುರಿತು ಕಳೆದ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ವಂಚನೆ ಪ್ರಕರಣ ಸಂಬಂಧ ಭಾರತದಿಂದ ಪಲಾಯನ ಮಾಡಿದ್ದು, ಸದ್ಯ ಬ್ರಿಟನ್‌ನಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಉದ್ಯಮಿ ನೀರವ್ ಮೋದಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ದಾಖಲಿಸಿದ್ದ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಗಳ ಕುರಿತು ವಿಚಾರಣೆಗೆ ಒಳಪಡಿಸಲು ನೀರವ್ ಮೋದಿ ಅವರನ್ನು ತಮ್ಮ ವಶಕ್ಕೆ ಪಡೆಯುವ ಭಾರತದ ಪ್ರಯತ್ನವನ್ನು ಮೋದಿ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮೋದಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್‌ ಸ್ಪಷ್ಟವಾಗಿ ತಳ್ಳಿಹಾಕಿದೆ ಎಂದು ಭಾರತೀಯ ಅಮೆರಿಕನ್‌ ವಕೀಲ ರವಿ ಭಾತ್ರಾ ಅವರು 60 ಪುಟಗಳ ಆದೇಶವನ್ನು ಉಲ್ಲೇಖಿಸಿ ತಿಳಿಸಿದರು.

‘ಮೋದಿ ಅವರು ಲಾಭಾಂಶವನ್ನು ತಮ್ಮದೇ ಕಂಪನಿಗೆ, ಹೆಚ್ಚುವರಿ ಮಾರಾಟ ಎಂಬಂತೆ ಬಿಂಬಿಸಿ ವರ್ಗಾವಣೆ ಮಾಡಿಕೊಂಡಿದ್ದರು. ಈ ಮೂಲಕ ಕಂಪನಿಯ ಷೇರು ಮೌಲ್ಯ ಹೆಚ್ಚುವಂತೆ ನೋಡಿಕೊಂಡಿದ್ದರು. ಇದರ ಖಾತರಿಯನ್ನು ನೀಡಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಮತ್ತು ಇತರೆ ಬ್ಯಾಂಕ್‌ಗಳಿಂದ ಹೆಚ್ಚುವರಿಯಾಗಿ ಸಾಲ ಪಡೆದು ವಂಚನೆಯನ್ನು ಎಸಗಲಾಗಿದೆ’ ಎಂದು ಆದೇಶ ಉಲ್ಲೇಖಿಸಿ ಭಾತ್ರಾ ಹೇಳಿದರು.

ಇನ್ನೊಂದೆಡೆ, ವೈಯಕ್ತಿಕ ಉದ್ದೇಶಗಳಿಗೆ ಬ್ಯಾಂಕ್‌ ಖಾತೆಯಿಂದ ಪಡೆದಿದ್ದ ಹಣವನ್ನು ಸಾಮಾನ್ಯ ಉದ್ಯಮ ವಹಿವಟು ಎಂಬಂತೆಯೂ ಬಿಂಬಿಸಿ ಮತ್ತೊಂದು ಲೋಪ ಎಸಗಲಾಗಿದೆ ಎಂದು ಭಾತ್ರಾ ಅವರು ಆದೇಶವನ್ನು ಉಲ್ಲೆಖಿಸಿ ಹೇಳಿದರು.

ಕೋರ್ಟ್ ಆದೇಶದಲ್ಲಿ ‘2011ರಿಂದ 2018ರ ಅವಧಿಯಲ್ಲಿ ಮೋದಿ, ಸಹಚರರು ಸಾಲ ಪಡೆಯುವುದು, ಹೆಚ್ಚುವರಿ ಖಾತರಿ ಇಲ್ಲದೆ ಅಥವಾ ಯಾವುದೋ ನೆಪ ಹೂಡಿ ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಪಿಎನ್‌ಬಿ ಸೇರಿದಂತೆ ಅನೇಕ ಬ್ಯಾಂಕ್‌ಗಳಿಗೆ ವಂಚನೆ ಎಸಗಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.