ವಾಷಿಂಗ್ಟನ್: ವಾಷಿಂಗ್ಟನ್ ಡಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ಪ್ರಯಾಣಿಕರೊಬ್ಬರ ಲಗೇಜ್ ಬ್ಯಾಗ್ ಪರಿಶೀಲಿಸುವ ವೇಳೆ ಕಸ್ಟಮ್ಸ್ ಮತ್ತು ಗಡಿ ಭದ್ರತಾ ಸಿಬ್ಬಂದಿಗೆ (ಸಿಬಿಪಿ) ಆಕಳ ಸಗಣಿಯ ಬೆರಣಿಗಳು ಪತ್ತೆಯಾಗಿವೆ.
ಬೆರಣಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗವನ್ನು ಹರಡುವ ಸಂಭಾವ್ಯ ವಾಹಕ ಎಂಬ ಕಾರಣಕ್ಕಾಗಿ, ಅಮೆರಿಕದಲ್ಲಿ ಅದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಗ್‌ನಲ್ಲಿ ಪತ್ತೆಯಾದ ಈ ಬೆರಣಿಗಳನ್ನು ನಾಶ ಮಾಡಲಾಯಿತು ಎಂದು ಕಸ್ಟಮ್ಸ್ ಅಧಿಕಾರಿಗಳು ಮತ್ತು ಗಡಿ ಭದ್ರತಾ ಪಡೆಯವರು ತಿಳಿಸಿದ್ದಾರೆ.
‘ಏಪ್ರಿಲ್ 4 ರಂದು ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಸಿಬಿಪಿ ವಿಭಾಗದ ಕೃಷಿ ತಜ್ಞರು ಸೂಟ್‌ಕೇಸ್‌ನಲ್ಲಿ ಎರಡು ಆಕಳ ಬೆರಣಿಗಳು ಇರುವುದನ್ನು ಗಮನಿಸಿದರು‘ ಎಂದು ಸೋಮವಾರ ವಿಮಾನ ನಿಲ್ದಾಣ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆ ತಿಳಿಸಿದೆ.
‘ಕಾಲುಬಾಯಿ ರೋಗ ಜಾನುವಾರುಗಳಿಗೆ ತಗಲುವ ಕಾಯಿಲೆ. ಅಮೆರಿಕದಲ್ಲಿ ಜಾನುವಾರು ಮಾಲೀಕರು ಹೆಚ್ಚು ಭಯಪಡುವಂತಹ ಕಾಯಿಲೆ. ಇದು ಗಂಭೀರ ಆರ್ಥಿಕ ಪರಿಣಾಮ ಸೃಷ್ಟಿಸುತ್ತದೆ‘ ಎಂದು ಬಾಲ್ಟಿಮೋರ್‌ನ ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.
ಪವಿತ್ರ ಭಾವನೆ: ಭಾರತ ಸಹಿತ ಜಗತ್ತಿನ ಹಲವೆಡೆ ಬೆರಣಿಯ ಬಗ್ಗೆ ಪವಿತ್ರ ಭಾವನೆ ಇದೆ. ಅದೊಂದು ಉತ್ತಮ ಉರುವಲು ಕೂಡ ಹೌದು. ಚರ್ಮದಲ್ಲಿನ ನಂಜು ನಿವಾರಕವಾಗಿಯೂ ಅದನ್ನು ಬಳಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಜಾನುವಾರುಗಳಿಗೆ ಬರುವ ಕಾಲು ಬಾಯಿ ರೋಗದ ಹೆಸರು ಕೇಳಿದರೇ ಅಮೆರಿಕದಲ್ಲಿ ಬೆಚ್ಚಿ ಬೀಳುವ ಸ್ಥಿತಿ ಇದ್ದು, 1929ರಿಂದೀಚೆಗೆ ಅಮೆರಿಕವು ಈ ಕಾಯಿಲೆಯಿಂದ ಮುಕ್ತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.