ವಾಷಿಂಗ್ಟನ್: ಕ್ಷಿಪಣಿ ರಕ್ಷಣಾ ಸಹಕಾರ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಜೊತೆ ಚರ್ಚೆ ನಡೆಸಿದೆ ಎಂದು ಪೆಂಟಗನ್ ಹೇಳಿದೆ.
ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಎಂದೂ ಹೇಳಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಡುಗಡೆ ಮಾಡಿರುವ 81 ಪುಟಗಳ ವರದಿಯಲ್ಲಿ ಪೆಂಟಗನ್ ಈ ವಿಷಯವನ್ನು ಉಲ್ಲೇಖಿಸಿದೆ.
ರಷ್ಯಾದಿಂದ ಎಸ್–400 ಟ್ರಯಂಫ್ ವಾಯುಪ್ರದೇಶ ರಕ್ಷಣಾ ಕ್ಷಿಪಣಿ (ಏರ್‌ಡಿಫೆನ್ಸ್ ಸಿಸ್ಟಂ) ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದಕ್ಕೆ ಈ ಹಿಂದೆ ಅಮೆರಿಕ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು.
ಕ್ಷಿಪಣಿ ಬೆದರಿಕೆ ವಿಶ್ವದ ಕೆಲವು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿವೆ ಎಂದೂ ಪೆಂಟಗನ್ ವರದಿಯಲ್ಲಿ ಹೇಳಿದೆ.
ಇಂಡೊ–ಪೆಸಿಫಿಕ್ ಕಾರ್ಯತಂತ್ರದಲ್ಲಿ ಭಾರತವು ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರ ಎಂದೂ ಬಣ್ಣಿಸಿದೆ.
ರಷ್ಯಾ ಮತ್ತು ಚೀನಾದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳು ಅಮೆರಿಕಕ್ಕೆ ಪ್ರಮುಖ ಬೆದರಿಕೆಯಾಗಿ ಪರಿಣಮಿಸುತ್ತಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ತನ್ನ ಬಳಿಯಿರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ನೀಡಲು ಈ ಹಿಂದೆ ಅಮೆರಿಕಕ್ಕೆ ಇಷ್ಟವಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.