ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
ಹೊಸ ಆಡಳಿತದಲ್ಲಿ ಉದ್ಯಮಪತಿಗಳು ಸೇರಿದಂತೆ ಟ್ರಂಪ್ ಮೊದಲ ಸರ್ಕಾರದಲ್ಲಿ ಇದ್ದ ಪ್ರಮುಖರು ಅವಕಾಶ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ.
ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಅವರನ್ನು ಬಲವಾಗಿ ಬೆಂಬಲಿಸಿದ್ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಆಡಳಿತದಲ್ಲಿ ಹುದ್ದೆ ಪಡೆಯಲಿದ್ದಾರೆ ಎನ್ನಲಾಗಿದೆ. ಟ್ರಂಪ್ ಅವರ ಪಕ್ಷಕ್ಕೆ ಮಸ್ಕ್ ಅವರು ದೊಡ್ಡ ಪ್ರಮಾಣದ ದೇಣಿಗೆಯನ್ನೂ ನೀಡಿದ್ದರು.
ಜೆ.ಪಿ ಮೋರ್ಗನ್ ಚೇಸ್ ಸಿಇಒ ಜೇಮಿ ಡೈಮನ್ ಹಾಗೂ ಹೆಜ್ ಫಂಡ್‌ನ (hedge fund) ಮ್ಯಾನೇಜರ್ ಜಾನ್ ಪೌಲ್‌ಸನ್ ಅವರೂ ಟ್ರಂಪ್ ಅವರ ಹೊಸ ಸರ್ಕಾರದಲ್ಲಿ ಹುದ್ದೆ ಪಡೆಯಲಿದ್ದಾರೆ ಎಂದು ಮೂಲಗಳ ತಿಳಿಸಿವೆ.
ಈ ಹಿಂದೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ರಾಬರ್ಟ್ ಎಫ್. ಕೆನಡಿ ಜೂನಿಯರ್, ಟ್ರಂಪ್ ಅವರ ಮೊದಲ ಅವಧಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ರಾಬರ್ಟ್ ಒಬ್ರಯಾನ್ ಹಾಗೂ ಮೈಕ್ ಪೋಂಪಿಯೊ ಅವರು ಈ ಅವಧಿಯಲ್ಲೂ ಆಡಳಿತದ ಭಾಗವಾಗಿರಲಿದ್ದಾರೆ.
ಟ್ರಂಪ್, ತಮ್ಮ ಮೊದಲ ಅವಧಿಯಲ್ಲಿ ಒಲವು ತೋರಿದ ನೀತಿಗಳನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಸುಂಕ ಪರಿಷ್ಕರಣೆ ನಡೆಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.