ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾದ ಅಸಾಧಾರಣ ಸನ್ನಿವೇಶದಲ್ಲಿ ಐತಿಹಾಸಿಕ ಅಭಿಯಾನವನ್ನು ಮುನ್ನಡೆಸಿದ್ದಕ್ಕಾಗಿ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಭಿನಂದಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿದ್ದಾರೆ.
ಪ್ರಾರಂಭದಲ್ಲಿ ಟ್ರಂಪ್ ವಿರುದ್ಧ ಬೈಡನ್ ಕಣದಲ್ಲಿದ್ದರು. ಆದರೆ ಚುನಾವಣಾ ಪ್ರಚಾರದಲ್ಲಿ ಹಿಂದೆ ಬಿದ್ದ ಕಾರಣ ಕಣದಿಂದ ಸರಿಯಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಕಮಲಾ ಹ್ಯಾರಿಸ್ ಅಖಾಡಕ್ಕಿಳಿದಿದ್ದರು.
'ಅಸಾಧಾರಣ ಸನ್ನಿವೇಶದಲ್ಲಿ ಮುಂದೆ ಬಂದಿರುವ ಕಮಲಾ ಹ್ಯಾರಿಸ್ ಐತಿಹಾಸಿಕ ಅಭಿಯಾನವನ್ನು ಮುನ್ನಡೆಸಿದ್ದಾರೆ. ಅಮೆರಿಕನ್ನರ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಅವರು ಹೊಂದಿದ್ದರು' ಎಂದು ಬೈಡನ್ ಉಲ್ಲೇಖಿಸಿದ್ದಾರೆ.
'ಕಮಲಾ ಹ್ಯಾರಿಸ್ ನನ್ನ ಅದ್ಭುತ ಜತೆಗಾರ್ತಿಯಾಗಿದ್ದು, ಸಮಗ್ರ, ಧೈರ್ಯವಂತ ಸಮಾಜ ಸೇವಕಿ' ಎಂದು ಹೇಳಿದ್ದಾರೆ.
'2020ರಲ್ಲಿ ನಾನು ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನಗೊಂಡಾಗ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿರುವುದು ನಾನು ಮಾಡಿದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆ. ಆಕೆಯ ಜೀವನಗಾಥೆ ಅಮೆರಿಕದ ಅತ್ಯುತ್ತಮ ಜೀವನ ಚರಿತ್ರೆಯನ್ನು ಪ್ರತಿನಿಧಿಸುತ್ತದೆ' ಎಂದು ಹೇಳಿದ್ದಾರೆ.
'ಕಮಲಾ ಹ್ಯಾರಿಸ್ ಹೋರಾಟ ಮುಂದುವರಿಯಲಿದೆ. ಆಕೆ ಎಲ್ಲ ಅಮೆರಿಕನ್ನರ ಚಾಂಪಿಯನ್ ಆಗಿರುತ್ತಾರೆ. ಎಲ್ಲದಕ್ಕಿಂತ ಮಿಗಿಲಾಗಿ ಅಮೆರಿಕದ ಮುಂದಿನ ಪೀಳಿಗೆಯ ಮಕ್ಕಳ ನಾಯಕಿಯಾಗಿ ಮುಂದುವರಿಯುತ್ತಾರೆ' ಎಂದು ಗುಣಗಾನ ಮಾಡಿದ್ದಾರೆ.
ಏತನ್ಮಧ್ಯೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿರುವ ಬೈಡನ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶ್ವೇತಭವನಕ್ಕೆ ಟ್ರಂಪ್ ಅವರಿಗೆ ಆಹ್ವಾನ ನೀಡಿರುವ ಬೈಡನ್, ಅಧಿಕಾರ ಹಸ್ತಾಂತರ ಸುಗಮವಾಗಿ ನೆರವೇರಲು ಸಹಕರಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.