ADVERTISEMENT

US Elections 2024: ಸಂವಾದದಲ್ಲಿ ಟ್ರಂಪ್‌ – ಕಮಲಾ ಮುಖಾಮುಖಿ; ವಾಕ್ಸಮರ

ಪಿಟಿಐ
Published 11 ಸೆಪ್ಟೆಂಬರ್ 2024, 3:11 IST
Last Updated 11 ಸೆಪ್ಟೆಂಬರ್ 2024, 3:11 IST
<div class="paragraphs"><p>ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್</p></div>

ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಾದ ಕಮಲಾ ಹ್ಯಾರಿಸ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಬುಧವಾರ ಮುಖಾಮುಖಿಯಾದರು. 

ADVERTISEMENT

ಪರಸ್ಪರ ಹಸ್ತಲಾಘವದೊಂದಿಗೆ ಶುರುವಾದ ಚರ್ಚೆ, ಒಂದೂವರೆ ಗಂಟೆ ನಡೆಯಿತು. ಪರಸ್ಪರ ನಿಂದನೆ ಹಾಗೂ ತುರುಸಿನ ವಾದಗಳ ಮೂಲಕ ಅಂತ್ಯಗೊಂಡಿತು.

ದೇಶದ ಗಡಿ ರಕ್ಷಣೆ, ವಿದೇಶಾಂಗ ನೀತಿ, ಆರ್ಥಿಕತೆ, ಗರ್ಭಪಾತ ನೀತಿ ಸೇರಿ ಅಧಿಕಾರ ದೊರೆತರೆ ಜಾರಿಗೆ ತರಲು ಇಚ್ಛಿಸುವ ಕ್ರಮಗಳು ಹಾಗೂ ಪ್ರಮುಖ ವಿಷಯಗಳನ್ನು ಕುರಿತು ತಮ್ಮ ತಮ್ಮ ನಿಲುವನ್ನು ಜನರ ಮುಂದಿಟ್ಟರು.

ಪೆನ್ಸಿಲ್ವೇನಿಯಾದಲ್ಲಿ ನಡೆದ ಈ ಚರ್ಚೆ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮೊದಲ‌ ನೇರ ಮುಖಾಮುಖಿ ಮಂಥನವೂ ಹೌದು.

‘ಎರಡು ಭಿನ್ನ ದೃಷ್ಟಿಕೋನ ಗಳನ್ನು ನೀವು ಆಲಿಸಿದ್ದೀರಿ. ಒಂದು, ದೇಶದ ಭವಿಷ್ಯವನ್ನು ಕೇಂದ್ರೀಕರಿಸಿದ ದೃಷ್ಟಿಕೋನ. ಮತ್ತೊಂದು, ಗತವನ್ನು ಸಾರುತ್ತಾ ಹಿಮ್ಮುಖವಾಗಿ ಸಾಗುವ ದೃಷ್ಟಿಕೋನ. ಆದರೆ, ನಾವು ಹೆಜ್ಜೆ ಹಿಂದಿಡುವವರಲ್ಲ’ ಎಂದು 59 ವರ್ಷದ ಕಮಲಾ ಹ್ಯಾರಿಸ್ ತಮ್ಮ ವಾದಸರಣಿಯ ಕೊನೆಯಲ್ಲಿ ಪ್ರತಿಪಾದಿಸಿದರು.

ಇದಕ್ಕೆ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ 78 ವರ್ಷದ ಡೊನಾಲ್ಡ್‌ ಟ್ರಂಪ್, ‘ಕಮಲಾ ಅವರು ತಾವು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದೆಲ್ಲಾ ಹೇಳಿಕೊಂಡಿದ್ದಾರೆ. ಬೈಡನ್‌–ಹ್ಯಾರಿಸ್‌ ನೇತೃತ್ವದ ಕಳೆದ ಮೂರೂವರೆ ವರ್ಷದ ಆಡಳಿತದಲ್ಲಿ ಈ ಎಲ್ಲವನ್ನೂ ಅವರು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು. 

‘ಗಡಿ ಸಮಸ್ಯೆ ಬಗೆಹರಿಸಲು ಭದ್ರತೆ ಸುಧಾರಣೆ ಮಾಡಲು, ಉದ್ಯೋಗಾವ ಕಾಶಗಳನ್ನು ಸೃಷ್ಟಿಸಲು ಮೂರೂವರೆ ವರ್ಷ ಅವಕಾಶವಿತ್ತು. ಅದನ್ನು ಏಕೆ ಮಾಡಲಿಲ್ಲ’ ಎಂಬ ಪ್ರಶ್ನೆಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು.

‘ಎಲ್ಲರನ್ನೂ ಒಗ್ಗೂಡಿಸುವ ಅಧ್ಯಕ್ಷರನ್ನು ದೇಶದ ಜನ ಬಯಸುತ್ತಾರೆ ಎಂದೇ ನಾನು ನಂಬಿದ್ದೇನೆ. ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷಳಾಗಿ ಉಳಿಯುವ ಭರವಸೆ ನೀಡುತ್ತೇನೆ’ ಎಂದು ಕಮಲಾ ವಾಗ್ದಾನ ಮಾಡಿದರು.

ಒಂದು ಹಂತದಲ್ಲಿ, ‘ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಕಮಲಾ ಮತ್ತು ಟ್ರಂಪ್‌ ಪರಸ್ಪರರನ್ನು ನಿಂದಿಸುವ ಮೂಲಕ ಚರ್ಚೆಯು ಕಾವು ಪಡೆದುಕೊಂಡಿತು. ಇಬ್ಬರೂ ಸ್ಪರ್ಧಿಗಳು ತಪ್ಪು ಮಾಹಿತಿ ನೀಡಿದಾಗಲೆಲ್ಲ, ಚರ್ಚೆ ನಡೆಸಿಕೊಟ್ಟ ‘ಎಬಿಸಿ ನ್ಯೂಸ್‌’ ಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಸತ್ಯಾಂಶ ತಿಳಿಸಿ, ಸಭಿಕರ ಗಮನಸೆಳೆದರು. 

‘ಕಮಲಾ ಅವರು ಮಾರ್ಕ್ಸಿಸ್ಟ್. ಅವರ ತಂದೆಯೂ ಅದೇ ವಿಷಯದಲ್ಲಿ ಪ್ರೊಫೆಸರ್‌ ಆಗಿದ್ದವರು. ಮಗಳಿಗೆ ಚೆನ್ನಾಗಿ ಉಪದೇಶ ಮಾಡಿರುತ್ತಾರೆ’ ಎಂದು ಟ್ರಂಪ್‌ ವ್ಯಂಗ್ಯವಾಡಿದರು.

ಟ್ರಂಪ್‌ ಮಾತುಗಳನ್ನು ತಳ್ಳಿಹಾಕಿದ ಕಮಲಾ, ‘ನೀವು (ಸಭಿಕರು) ಸುಳ್ಳುಗಳ ಕಂತೆಯನ್ನೇ ಆಲಿಸಲಿದ್ದೀರಿ ಎಂದು ನಾನು ಮೊದಲೇ ಹೇಳಿದ್ದೇನೆ. ಹೀಗಾಗಿ, ಅವರ ಮಾತುಗಳನ್ನು ಕೇಳಿ ನನಗೇನೂ ಅಚ್ಚರಿ ಆಗಿಲ್ಲ’ ಎಂದರು.

ಡೊನಾಲ್ಡ್‌ ಟ್ರಂಪ್‌ ಹೇಳಿದ್ದು...
  • ಗರ್ಭಪಾತ ಕುರಿತ ನೀತಿ ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಮ್ಮ ಪ್ರತಿಪಾದನೆ. ಕಮಲಾ ಹ್ಯಾರಿಸ್‌ ಈ ಕುರಿತು ಸುಳ್ಳು ಹೇಳುತ್ತಿದ್ದಾರೆ. ನಾನು ಯಾವುದೇ ಮಸೂದೆಗೆ ಸಹಿ ಹಾಕುವುದಿಲ್ಲ.
    ಇದು ರಾಜ್ಯಗಳ ವಿವೇಚನೆಗೆ ಬಿಟ್ಟ ವಿಷಯ

  • ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ರಷ್ಯಾ–ಉಕ್ರೇನ್‌ ಯುದ್ಧವನ್ನು ಕೊನೆಗಾಣಿಸುತ್ತೇನೆ. ಝೆಲೆನ್‌ಸ್ಕಿ ಮತ್ತು ಪುಟಿನ್‌ ಇಬ್ಬರೂ ನನಗೆ ಚೆನ್ನಾಗಿ ಗೊತ್ತು; ಅವರಿಬ್ಬರ ಜೊತೆಗೂ ನನಗೆ ಉತ್ತಮ ಬಾಂಧವ್ಯವಿದೆ

  • ಅಧ್ಯಕ್ಷನಾಗಿ ನನ್ನ ನಾಲ್ಕು ವರ್ಷದ ಅವಧಿಯಲ್ಲಿ ಯುದ್ಧದ ಭೀತಿಯೇ ಇರಲಿಲ್ಲ. ಅಫ್ಗಾನಿಸ್ತಾನದಿಂದ ಸೇನೆ ವಾಪಸು ಕರೆಸಿಕೊಂಡಿದ್ದು ದೇಶದ ಇತಿಹಾಸದಲ್ಲಿಯೇ ತುಂಬ ಇರಿಸುಮುರಿಸಿನ ಸಂದರ್ಭವಾಗಿತ್ತು

  • ಇಸ್ರೇಲ್‌ ಬಗ್ಗೆ ಕಮಲಾ ಅವರಿಗೆ ದ್ವೇಷದ ಭಾವನೆ ಇದೆ. ಅವರು ಅಧ್ಯಕ್ಷರಾದರೆ ಎರಡೇ ವರ್ಷದಲ್ಲಿ ಇಸ್ರೇಲ್‌ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಒಂದು ವೇಳೆ ಈಗ ನಾನು ಅಧ್ಯಕ್ಷ ಸ್ಥಾನದಲ್ಲಿ ಇದ್ದಿದ್ದರೆ ಇಸ್ರೇಲ್‌ ಹಾಗೂ ಹಮಾಸ್ ನಡುವೆ ಯುದ್ಧವೇ ನಡೆಯುತ್ತಿರಲಿಲ್ಲ

ಕಮಲಾ ಹ್ಯಾರಿಸ್‌ ಹೇಳಿದ್ದು...
  • ಟ್ರಂಪ್‌ ಆಯ್ಕೆಯಾದರೆ ಗರ್ಭಪಾತ ಕುರಿತ ಮಸೂದೆಗೆ ಸಹಿ ಹಾಕುತ್ತಾರೆ. ಗರ್ಭಪಾತ, ಹೆರಿಗೆ ಮೇಲೂ ಕಣ್ಗಾವಲು ಇಡುವ ವ್ಯವಸ್ಥೆ ಬರಲಿದೆ. ತಮ್ಮ ದೇಹದ ಕುರಿತು ನಿರ್ಧರಿಸುವ ಸ್ವಾತಂತ್ರ್ಯ ಜನರಿಗೆ ಇರಬೇಕು

  • ಡೊನಾಲ್ಡ್ ಟ್ರಂಪ್‌ ಅವರು ಊಹಿಸಲಾಗದ ಹಲವು ದುರ್ಬಲ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಇದಕ್ಕೊಂದು ಉದಾಹರಣೆ ತಾಲಿಬಾನ್‌ ಜೊತೆಗಿನ ಮಾತುಕತೆ. ಈಗ, ಅಫ್ಗನ್‌ನಿಂದ ಸೇನೆ ಹಿಂದೆ ಕರೆಯಿಸಿದ ಬೈಡನ್‌ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ

  • ರಷ್ಯಾ–ಉಕ್ರೇನ್‌ ನಡುವಣ ಯುದ್ಧವನ್ನು ನಿಲ್ಲಿಸುತ್ತೇನೆ’ ಎಂಬ ಟ್ರಂಪ್‌ ಭರವಸೆ ರಾಜಿ ಆಗುವುದೇ ಆಗಿದೆ. ಆದರೆ, ಅದು ಅಮೆರಿಕನ್ನರ ಗುಣವಲ್ಲ. ಅಮೆರಿಕ ನೀಡಿದ ಬೆಂಬಲದ ಕಾರಣದಿಂದಲೇ ಉಕ್ರೇನ್‌ ಇಂದು ಸ್ವತಂತ್ರ ರಾಷ್ಟ್ರವಾಗಿದೆ

  • ಇಸ್ರೇಲ್‌ಗೆ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿದೆ. ಅದು ಹೇಗೆ ಎಂಬುದೇ ಪ್ರಶ್ನೆ. ಇಸ್ರೇಲ್‌–ಹಮಾಸ್ ಯುದ್ಧ ಕೊನೆಗಾಣಬೇಕು ಎಂದು ನಾವೂ ಬಯಸುತ್ತೇವೆ. ಅದಕ್ಕೆ ಮೊದಲು ಒತ್ತೆಯಾಳುಗಳ ಬಿಡುಗಡೆ ಆಗಬೇಕು. ಅದಕ್ಕಾಗಿ ಕದನವಿರಾಮ ಘೋಷಣೆ ಆಗಬೇಕು. ಅದಕ್ಕೆ ನಾನು ಬದ್ಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.