ADVERTISEMENT

ಹಮಾಸ್‌ನ ಐವರು ಕಮಾಂಡರ್‌ಗಳ ಹತ್ಯೆ: ಇಸ್ರೇಲ್‌ ರಕ್ಷಣಾ ಪಡೆ ಹೇಳಿಕೆ

ಗಾಜಾದಲ್ಲಿ ಮುಂದುವರಿದ ಸೀಮಿತ ಭೂದಾಳಿ

ಏಜೆನ್ಸೀಸ್
Published 27 ಅಕ್ಟೋಬರ್ 2023, 14:24 IST
Last Updated 27 ಅಕ್ಟೋಬರ್ 2023, 14:24 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ದೇರ್‌ ಅಲ್‌– ಬಾಲಾಹ್‌ (ಗಾಜಾ ಪಟ್ಟಿ): ಗಾಜಾಪಟ್ಟಿಯಲ್ಲಿ ನಡೆಸಿದ ದಾಳಿ ವೇಳೆ ಹಮಾಸ್‌ನ ಐವರು ಹಿರಿಯ ಕಮಾಂಡರ್‌ಗಳು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಹೇಳಿದೆ. 

ಗುರುವಾರ ನಡೆಸಿದ ವಾಯುದಾಳಿಯೊಂದರಲ್ಲಿ ಹಮಾಸ್‌ನ ಬೇಹುಗಾರಿಕೆ ವಿಭಾಗದ ಉಪ ಮುಖ್ಯಸ್ಥ ಶಾದಿ ಬರೂದ್‌ ಹತರಾಗಿದ್ದಾರೆ. ಇಸ್ರೇಲ್‌ ಮೇಲೆ ನಡೆದ ದಾಳಿಯ ಸಂಚು ರೂಪಿಸಿದವರಲ್ಲಿ ಬರೂದ್‌ ಕೂಡ ಸೇರಿದ್ದರು. ಮತ್ತೊಂದು ದಾಳಿಯಲ್ಲಿ ಖಾನ್‌ ಯೂನಿಸ್‌ನ ರಾಕೆಟ್‌ ಸಂಗ್ರಹಾಗಾರದ ಮುಖ್ಯಸ್ಥ ಹಸನ್‌ ಅಲ್‌ ಅಬ್ದುಲ್ಲಾ ಮೃತಪಟ್ಟಿದ್ದಾರೆ ಎಂದು ಐಡಿಎಫ್‌ ಹೇಳಿದೆ.

ADVERTISEMENT

ಹಮಾಸ್‌ನ ಹಿರಿಯ ಕಮಾಂಡರ್‌ಗಳಾದ ರಿಫಾತ್‌ ಅಬ್ಬಾಸ್‌, ಇಬ್ರಾಹಿಂ ಜದ್ಬಾ ಮತ್ತು ತಾರಿಕ್‌ ಮರೌಫ್‌ ಅವರೂ ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಸಂಜೆ ನೀಡಿದ ಮತ್ತೊಂದು ಹೇಳಿಕೆಯಲ್ಲಿ ಮಿಲಿಟರಿ ತಿಳಿಸಿದೆ.

ಮುಂದುವರಿದ ದಾಳಿ:

ಈ ಮಧ್ಯೆ ಇಸ್ರೇಲ್‌ ಪಡೆಯು ಫೈಟರ್‌ ಜೆಟ್‌ಗಳು ಮತ್ತು ಡ್ರೋನ್‌ಗಳ ನೆರವಿನೊಂದಿಗೆ  ಗಾಜಾದಲ್ಲಿ ಮತ್ತು ಗಾಜಾ ಹೊರವಲಯದಲ್ಲಿ ಸೀಮಿತ ಭೂದಾಳಿಯನ್ನು ಮುಂದುವರಿಸಿವೆ ಎಂದು ಇಸ್ರೇಲ್‌ ಮಿಲಿಟರಿ ಶುಕ್ರವಾರ ಹೇಳಿದೆ. ಗಾಜಾ ಮೇಲೆ ಪೂರ್ಣ ಪ್ರಮಾಣದಲ್ಲಿ ಭೂದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವುದರ ಜತೆಗೇ ಈ ದಾಳಿ ಮುಂದುವರಿಸಿದೆ.

ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಆಕ್ರಮಣ ನಡೆಸಿದ ಬಳಿಕ ಇಸ್ರೇಲ್‌ ನಡೆಸಿರುವ ವಾಯುದಾಳಿಯಲ್ಲಿ 7,326 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 3,038ಕ್ಕೂ ಹೆಚ್ಚು ಮಕ್ಕಳು ಮತ್ತು 1,500ಕ್ಕೂ ಹೆಚ್ಚು ಮಹಿಳೆಯರು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಒತ್ತೆಯಾಳುಗಳ ಬಿಡುಗಡೆಗೆ ಕದನವಿರಾಮ ಅಗತ್ಯ’: 

ಕದನವಿರಾಮ ಒಪ್ಪಂದಕ್ಕೆ ಬರುವವರೆಗೆ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ. ದಾಳಿ ವೇಳೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಆಗುವುದಿಲ್ಲ ಎಂದು ಪ್ಯಾಲೆಸ್ಟೀನಿಯನ್ನರ ಹಮಾಸ್‌ ಸಂಘಟನೆ ಹೇಳಿರುವುದಾಗಿ ರಷ್ಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಇಸ್ರೇಲ್‌ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿಂದ  ಕರೆತಂದ ಒತ್ತೆಯಾಳುಗಳು ವಿವಿಧೆಡೆ ಇದ್ದು ಅವರನ್ನು ಒಂದೆಡೆ ಸೇರಿಸಲು ಮತ್ತು ಬಿಡುಗಡೆ ಮಾಡಲು ಕಾಲಾವಕಾಶ ಬೇಕು ಎಂದು  ಮಾಸ್ಕೊಗೆ ಭೇಟಿ ನೀಡಲಿರುವ ಹಮಾಸ್‌ ನಿಯೋಗದ ಸದಸ್ಯ ಅಬು ಹಮೀದ್‌ ಹೇಳಿದ್ದಾರೆ.

ಹಮಾಸ್‌ ನಿಯೋಗದ ಭೇಟಿಗೆ ಅವಕಾಶ ನೀಡಬಾರದು ಎಂದು ಇಸ್ರೇಲ್‌ ರಷ್ಯಾವನ್ನು ಒತ್ತಾಯಿಸಿದೆ.

ಇಸ್ರೇಲ್‌ ದಾಳಿಯಿಂದ ಈವರೆಗೆ 50 ಮಂದಿ ಒತ್ತೆಯಾಳುಗಳು ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ನ ಮಿಲಿಟರಿ ವಿಭಾಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.