ADVERTISEMENT

ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆಗೆ ಅಮೆರಿಕ ಆಯೋಗದ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2022, 7:49 IST
Last Updated 20 ಆಗಸ್ಟ್ 2022, 7:49 IST
ಬಿಲ್ಕಿಸ್‌ ಬಾನು
ಬಿಲ್ಕಿಸ್‌ ಬಾನು    

ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌) ಖಂಡಿಸಿದೆ.

ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಆಯೋಗ, ‘2002ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಕುಟುಂಬಸ್ಥರನ್ನು ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿಯನ್ನು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಬಿಡುಗಡೆ ಮಾಡಿರುವುದನ್ನುಉಪಾಧ್ಯಕ್ಷ ಅಬ್ರಹಾಂ ಕೂಪರ್ ಖಂಡಿಸಿದ್ದಾರೆ’ ಎಂದು ಹೇಳಿದೆ.

‘2002ರ ಗುಜರಾತ್ ಗಲಭೆಯಲ್ಲಿ ದೈಹಿಕ ಮತ್ತು ಲೈಂಗಿಕ ಹಿಂಸೆ ಮಾಡಿದ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡದಿರುವುದು ನ್ಯಾಯದ ಅಪಹಾಸ್ಯವಾಗಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವವರಿಗೆ ಭಾರತದಲ್ಲಿ ನೀಡಲಾಗುತ್ತಿರುವ ಶಿಕ್ಷೆಯ ಮಾದರಿಯ ಭಾಗವಾಗಿದೆ’ ಎಂದುಯುಎಸ್‌ಸಿಐಆರ್‌ಎಫ್‌ನ ಆಯುಕ್ತಸ್ಟೀಫನ್ ಷ್ನೆಕ್ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಯುಎಸ್‌ಸಿಐಆರ್‌ಎಫ್‌ ಹಲವು ಬಾರಿ ಭಾರತವನ್ನು ಟೀಕಿಸಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸಿದೆ ಎಂದು 2021ರ ಏಪ್ರಿಲ್‌ನಲ್ಲಿಯೂ ಯುಎಸ್‌ಸಿಐಆರ್‌ಎಫ್‌ ಹೇಳಿತ್ತು. ಅಲ್ಲದೆ, ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ (ಸಿಪಿಸಿ) ಎಂದು ಹೆಸರಿಸುವಂತೆ ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲಾ 11 ಅಪರಾಧಿಗಳನ್ನು ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಅ‌ನ್ವಯ ಕಳೆದ ಸೋಮವಾರ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.

ಬಿಲ್ಕಿಸ್ ಬಾನು ಅವರ ಕುಟುಂಬದ ಏಳು ಸದಸ್ಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಆರೋಪದ ಮೇಲೆ 11 ಮಂದಿಗೆ 2008ರ ಜ.21 ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.

ಅಪರಾಧಿಗಳು 15 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಅವರಲ್ಲಿ ಒಬ್ಬರು ಅವಧಿಪೂರ್ವ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಅಪರಾಧಿಗಳ ಶಿಕ್ಷೆ ಹಿಂತೆಗೆದುಕೊಳ್ಳುವ ವಿಷಯ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಕೆಲ ತಿಂಗಳ ಹಿಂದೆ ರಚಿಸಲಾದ ಸಮಿತಿಯು ಪ್ರಕರಣದ ಎಲ್ಲಾ 11 ಅಪರಾಧಿಗಳ ಕ್ಷಮಾಪಣೆ ಪರವಾಗಿ ಸರ್ವಾನುಮತದ ನಿರ್ಧಾರ ತೆಗೆದುಕೊಂಡು, ರಾಜ್ಯ ಸರ್ಕಾರಕ್ಕೆ ಶಿಫಾರಸು ಕಳುಹಿಸಿತ್ತು. ಅದರಂತೆ ಎಲ್ಲ ಆರೋಪಿಗಳು ಆ.14ರ ಸೋಮವಾರ ಬಿಡುಗಡೆಯಾಗಿದ್ದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.