ADVERTISEMENT

ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ: ಅಮೆರಿಕ

ಪಿಟಿಐ
Published 20 ಮಾರ್ಚ್ 2024, 13:54 IST
Last Updated 20 ಮಾರ್ಚ್ 2024, 13:54 IST
<div class="paragraphs"><p>ಪಾಕಿಸ್ತಾನ ಚುನಾವಣೆ</p></div>

ಪಾಕಿಸ್ತಾನ ಚುನಾವಣೆ

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವುದನ್ನು ಅಮೆರಿಕ ಉಲ್ಲೇಖಿಸಿದೆ. ಅಲ್ಲದೆ, ಪಾಕಿಸ್ತಾನದ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸಲು ಹಾಗೂ ಭಯೋತ್ಪಾದಕರ ಬೆದರಿಕೆಯನ್ನು ಎದುರಿಸಲು ಸಹಕಾರ ನೀಡುವ ವಿಚಾರವಾಗಿ ಬದ್ಧತೆ ವ್ಯಕ್ತಪಡಿಸಿದೆ.

ADVERTISEMENT

‘ಚುನಾವಣೆ ನಂತರದ ಪಾಕಿಸ್ತಾನ: ಪಾಕಿಸ್ತಾನದಲ್ಲಿ ಪ್ರಜಾತಂತ್ರದ ಭವಿಷ್ಯದ ಬಗ್ಗೆ ಪರಿಶೀಲನೆ ಮತ್ತು ಅಮೆರಿಕ–ಪಾಕಿಸ್ತಾನ ನಡುವಿನ ಸಂಬಂಧ’ ಎಂಬ ಬಗ್ಗೆ ಕಾಂಗ್ರೆಸ್‌ನ (ಸಂಸತ್‌) ಸಮಿತಿಯೊಂದರ ಮುಂದೆ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ಅದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಬಹಿರಂಗಪಡಿಸಿರುವ ಲು ಅವರು, ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವುದರ ಮೇಲೆ ಅನಗತ್ಯ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂಬ ಸ್ಪಷ್ಟ ಹೇಳಿಕೆಯನ್ನು ವಿದೇಶಾಂಗ ಇಲಾಖೆಯು ಚುನಾವಣೆಯ ಮಾರನೆಯ ದಿನವೇ ಬಿಡುಗಡೆ ಮಾಡಿತ್ತು ಎಂದು ಉಲ್ಲೇಖಿಸಿದ್ದಾರೆ.

ವಿದೇಶಾಂಗ ಇಲಾಖೆಯು ಚುನಾವಣೆ ಸಂಬಂಧಿತ ಹಿಂಸಾಚಾರವನ್ನು, ಮಾನವ ಹಕ್ಕುಗಳ ಮೇಲಿನ ನಿರ್ಬಂಧಗಳನ್ನು ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲಿನ ದಾಳಿಗಳನ್ನು ಖಂಡಿಸಿದೆ ಎಂದು ಲು ಅವರು ಹೇಳಿದ್ದಾರೆ.

‘ಮತದಾನದ ದಿನ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ಹೇರಬಾರದು ಎಂದು ಹೈಕೋರ್ಟ್ ಸೂಚಿಸಿದ್ದರೂ, ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದರು’ ಎಂದು ಅವರು ವಿವರಿಸಿದ್ದಾರೆ.

ಲು ಅವರು ಸಾರ್ವತ್ರಿಕ ಚುನಾವಣೆಯಲ್ಲಿನ ಕೆಲವು ಸಕಾರಾತ್ಮಕ ಅಂಶಗಳನ್ನು ಕೂಡ ಪಟ್ಟಿಮಾಡಿದ್ದಾರೆ. ‘ಹಿಂಸಾಚಾರದ ಬೆದರಿಕೆ ಇದ್ದರೂ 6 ಕೋಟಿಗೂ ಹೆಚ್ಚು ಪಾಕಿಸ್ತಾನೀಯರು ಮತ ಚಲಾಯಿಸಿದರು. 2018ರಲ್ಲಿ ಆಯ್ಕೆ ಮಾಡಿದ್ದಕ್ಕಿಂತ ಶೇಕಡ 50ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ಸಂಸತ್ತಿಗೆ ಆಯ್ಕೆ ಮಾಡಿದರು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.