ADVERTISEMENT

ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರ ನಾಯಕ ಅಲ್‌ ಬಾಗ್ದಾದಿ ಹತ್ಯೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2019, 5:54 IST
Last Updated 27 ಅಕ್ಟೋಬರ್ 2019, 5:54 IST
ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್ ಅಲ್‌ ಬಾಗ್ದಾದಿ
ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್ ಅಲ್‌ ಬಾಗ್ದಾದಿ   

ಉತ್ತರ ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚಾರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್‌ ಅಲ್‌ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ‘ಬ್ಲೂಮ್‌ಬರ್ಗ್‌’ ಜಾಲತಾಣ ವರದಿ ಮಾಡಿದೆ.

ಅಮೆರಿಕದ ವಿಶೇಷ ಪಡೆಗಳು ಉತ್ತರ ಸಿರಿಯಾದಇಬ್ಲಿಬ್ ಪ್ರಾಂತ್ಯದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸಿದವು. ಈ ಸಂದರ್ಭ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಲಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ‘ನ್ಯೂಸ್‌ವೀಕ್’ವರದಿ ಮಾಡಿದೆ. ಈ ವರದಿಯನ್ನು ಬ್ಲೂಮ್‌ಬರ್ಗ್‌ ಖಚಿತಪಡಿಸಿಲ್ಲ.

ಒಂದು ವೇಳೆ ಅಮೆರಿಕದ ಸೇನಾ ಮೂಲಗಳು ಹೇಳುತ್ತಿರುವಂತೆಬಾಬ್ದಾದಿಯ ಸೆರೆ ಅಥವಾ ಹತ್ಯೆಯಾಗಿದ್ದಲ್ಲಿ, 2011ರ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಇದು ಅಮೆರಿಕ ಪಡೆಗಳದೊಡ್ಡ ಬೇಟೆ ಎನಿಸಿಕೊಳ್ಳಲಿದೆ.

‘ಟ್ರಂಪ್ ಭಾನುವಾರ ಮಹತ್ತರ ಹೇಳಿಕೆಯೊಂದನ್ನು ನೀಡಲಿದ್ದಾರೆ’ಎಂದು ಶ್ವೇತಭವನಶನಿವಾರ ಸಂಜೆ ಹೇಳಿಕೆ ಹೊರಡಿಸಿತ್ತು. ಟ್ರಂಪ್ ಅವರು ಭಾನುವಾರ (ಭಾರತೀಯ ಕಾಲಮಾನ) ಮುಂಜಾನೆ 6.30ಕ್ಕೆ ‘ಮಹತ್ತರವಾದದ್ದು ಈಗಷ್ಟೇ ಆಗಿದೆ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಜಗತ್ತಿನ ಗಮನ ಸೆಳೆದಿತ್ತು.

ಸಿರಿಯಾದಿಂದಅಮೆರಿಕದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಟ್ರಂಪ್ ಅವರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಾಗ್ದಾದಿಯ ಬೇಟೆ ಟ್ರಂಪ್‌ ಅವರ ಗೌರವ ಉಳಿಸಿಕೊಳ್ಳಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿರಿಯಾದ ಇಬ್ಲಿಬ್‌ ಪ್ರಾಂತ್ಯದಲ್ಲಿ ಅಮೆರಿಕದ ಸೇನಾಪಡೆಗಳ ನೆಲೆ ಇರಲಿಲ್ಲ. ಅದು ಜಿಹಾದಿ ಪಡೆಗಳ ನಿರಾಶ್ರಿತ ಕೇಂದ್ರದಂತೆ ರೂಪುಗೊಂಡಿತ್ತು. ರಷ್ಯಾ ಬೆಂಬಲದಿಂದ ಅಧಿಕಾರದಲ್ಲಿರುವ ಸಿರಿಯಾದ ಅಧ್ಯಕ್ಷ ಬಷರ್‌ ಅಲ್ ಅಸಾದ್‌ ಅವರ ಸರ್ಕಾರಿ ಪಡೆಗಳು ಈ ಪ್ರಾಂತ್ಯವನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೋರಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.