ADVERTISEMENT

‘ಜೋ ಬೈಡನ್‌ ಹಾಗೂ ಪ್ರಧಾನಿ ಮೋದಿ ಮಾತುಕತೆಯಿಂದ ಉಭಯ ದೇಶಗಳ ಬಾಂಧವ್ಯ ಗಟ್ಟಿ’

ಪಿಟಿಐ
Published 25 ಸೆಪ್ಟೆಂಬರ್ 2021, 8:41 IST
Last Updated 25 ಸೆಪ್ಟೆಂಬರ್ 2021, 8:41 IST
ನ್ಯೂಯಾರ್ಕ್‌ನಲ್ಲಿ ನಡೆದ ಕ್ವಾಡ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇದ್ದಾರೆ –ಎಪಿ/ಪಿಟಿಐ ಚಿತ್ರ
ನ್ಯೂಯಾರ್ಕ್‌ನಲ್ಲಿ ನಡೆದ ಕ್ವಾಡ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇದ್ದಾರೆ –ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮೊದಲ ದ್ವಿಪಕ್ಷೀಯ ಮಾತುಕತೆ ನಡೆದಿರುವುದು ಸ್ವಾಗತಾರ್ಹ. ಉಭಯ ನಾಯಕರ ಭೇಟಿಯಿಂದ ಅಮೆರಿಕ–ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟೂ ಗಟ್ಟಿಗೊಳ್ಳಲಿದೆ ಎಂದು ಪ್ರಮುಖ ಸಂಸದರು ಸ್ವಾಗತಿಸಿದ್ದಾರೆ.

ಬೈಡನ್‌ ಅವರು ಭೌತಿಕವಾಗಿ ಮೊದಲ ಬಾರಿಗೆ ಕ್ವಾಡ್‌ ಶೃಂಗಸಭೆ ಆಯೋಜಿಸಿದ್ದಾರೆ. ಈ ಕ್ರಮ ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆ, ಸುರಕ್ಷತೆ ಖಾತರಿಪಡಿಸುವ ಜೊತೆಗೆ ಮಿತ್ರ ರಾಷ್ಟ್ರಗಳೊಂದಿಗಿನ ಸಹಕಾರವನ್ನು ವೃದ್ಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕ್ವಾಡ್‌ ಸದಸ್ಯ ರಾಷ್ಟ್ರಗಳಾದ ಭಾರತ, ಜಪಾನ್‌ ಮತ್ತು ಆಸ್ಟ್ರೇಲಿಯಾ ನಾಯಕರೊಂದಿಗೆ ಅಧ್ಯಕ್ಷ ಬೈಡನ್‌ ಮಾತುಕತೆ ನಡೆಸಿರುವುದು ನನ್ನಲ್ಲಿ ಸಂತಸ ಮೂಡಿಸಿದೆ’ ಎಂದು ಸಂಸದ ಫ್ರ್ಯಾಂಕ್ ಪಲ್ಲೋನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಸ್ಥಾಪನೆಯಾಗಿದ್ದು, ತಾಲಿಬಾನ್‌ಗೆ ಚೀನಾ ಬೆಂಬಲಿಸುತ್ತಿದೆ. ಈ ಕಾರಣದಿಂದ ಈಗ ಅಮೆರಿಕ ಹಾಗೂ ಭಾರತ ನಡುವಿನ ಮೈತ್ರಿ ಹೆಚ್ಚು ಮುಖ್ಯವಾಗುತ್ತದೆ. ಉಭಯ ದೇಶಗಳ ಮೈತ್ರಿಯಿಂದ ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಹೆಚ್ಚು ಸ್ಥಿರತೆ ಸಾಧಿಸಬಹುದು’ ಎಂದು ಸಂಸದ ಮಾರ್ಕ್ ಗ್ರೀನ್‌ ಅಭಿಪ್ರಾಯಪಟ್ಟಿದ್ದಾರೆ.

ಅಮಿ ಬೆರಾ, ಬಿಲ್‌ ಹೆಗರ್ಟಿ ಸೇರಿದಂತೆ ಹಲವು ಸಂಸದರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.