ಟ್ರಂಪ್‌ಗೆ ಆರಂಭಿಕ ಮುನ್ನಡೆ ದೊರೆಯುತ್ತಿದ್ದಂತೆ 'ಗೇಮ್, ಸೆಟ್ ಅಂಡ್ ಮ್ಯಾಚ್' ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್, ಇದೀಗ, 'ಅಮೆರಿಕವು ನಿರ್ಮಾಣ ಮಾಡುವವರಿಂದ ಕೂಡಿದ ರಾಷ್ಟ್ರ. ಶೀಘ್ರದಲ್ಲೇ, ನೀವು ನಿರ್ಮಾಣದಲ್ಲಿ ತೊಡಗಿಕೊಳ್ಳಲು ಮುಕ್ತರಾಗುತ್ತೀರಿ' ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದು, ‘ಗೇಮ್, ಸೆಟ್ ಅಂಡ್ ಮ್ಯಾಚ್’ ಎಂದು ಉದ್ಯಮಿ ಇಲಾನ್ ಮಸ್ಕ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಒಂದೆಡೆ ಕಮಲಾ ಅವರು ತಮ್ಮ ಭಾಷಣವನ್ನು ರದ್ದುಪಡಿಸಿದ್ದರೆ, ಇತ್ತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಫ್ಲೋರಿಡಾದಲ್ಲಿ ಮಾತನಾಡಲು ಸಜ್ಜಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಅವರು 247–210 ಅಂತರದ ಮುನ್ನಡೆಯಲ್ಲಿದ್ದಾರೆ. ಸರ್ಕಾರ ರಚನೆಗೆ 270 ಸ್ಥಾನಗಳು ಬೇಕು.
ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆಯ ಅಂತರ ಏರಿಕೆಯಾಗುತ್ತಿದ್ದಂತೆ ಕಮಲಾ ಹ್ಯಾರಿಸ್ ಅವರು ಚುನಾವಣೆಯನ್ನುದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ರದ್ದುಪಡಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಅಲ್ಮಾ ಮಥರ್‌ನಲ್ಲಿ ಕಮಲಾ ಭಾಷಣ ನಿಗದಿಯಾಗಿತ್ತು.
'ಬ್ಯಾಟಲ್‌ಗ್ರೌಂಡ್ ರಾಜ್ಯ'ಗಳ ಪೈಕಿ ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.
ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಷಿಗನ್, ವಿಸ್ಕಾನ್‌ಸ್ಕಿನ್ ಮತ್ತು ನೆವಾಡದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ರಾಜ್ಯಗಳು ಇಬ್ಬರ ಪಾಲಿಗೂ ನಿರ್ಣಾಯಕವಾಗಲಿವೆ.
ಅಮೆರಿಕದ 50 ರಾಜ್ಯಗಳಲ್ಲಿ ಈ ಏಳು ರಾಜ್ಯಗಳ ಮತದಾರರನ್ನು ಹೊರತುಪಡಿಸಿ ಹೆಚ್ಚಿನ ರಾಜ್ಯಗಳ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ.
ಈ ಆಭಿಯಾನದ ಸಮಯದಲ್ಲಿ ಶ್ರಮಿಸಿದ ಹಾಗೂ ಸಂತಸವನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳು.–ಕಮಲಾ ಹ್ಯಾರಿಸ್
ನಿರ್ಣಾಯಕ ರಾಜ್ಯ ಉತ್ತರ ಕರೋಲಿನಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಕಮಲಾ ಹ್ಯಾರಿಸ್ ಎದುರು 230–205ರ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಕಮಲಾ ಹ್ಯಾರಿಸ್: ಕೊಲೊರಾಡೊ (10), ಕನೆಕ್ಟಿಕಟ್ (7), ವಾಷಿಂಗ್ಟನ್ (3), ಡೆಲವೇರ್ (3), ಇಲಿನಿಯೊಸ್ (19), ಮಸ್ಸಾಚುಸೆಟ್ಸ್ (11), ಮೇರಿಲ್ಯಾಂಡ್ (10), ನ್ಯೂಜೆರ್ಸಿ (14), ನ್ಯೂಯಾರ್ಕ್ (28), ರೋಡ್ ಐಸ್‌ಲ್ಯಾಂಡ್ (4), ವೆರ್ಮಾಂಟ್ (3).
ಡೊನಾಲ್ಡ್ ಟ್ರಂಪ್: ಯೊಮಿಂಗ್ (3), ವೆಸ್ಟ್ ವರ್ಜೀನಿಯಾ (4), ಉತಾಹ್ (6), ಟೆಕ್ಸಾಸ್ (40), ಟೆನೆಸ್ಸೀ (11), ದಕ್ಷಿಣ ಕರೋಲಿನಾ (9), ಒಕ್ಲಾಹೊಮಾ (7), ಒಹಿಯೊ (17), ನೆಬ್ರಸ್ಕಾ (3), ಉತ್ತರ ಡಕೋಟ (3), ಮೊಂಟಾನ (4), ಮಿಸ್ಸಿಸ್ಸಿಪ್ಪಿ (6), ಮಿಸ್ಸೌರಿ (10), ಲೂಸಿಯಾನಾ (8), ಕೆಂಟುಕಿ (8), ಕಾನ್ಸಾಸ್ (6), ಇಂಡಿಯಾನಾ (11), ಲೋವಾ (6), ಫ್ಲೋರಿಡಾ (30), ಅರ್ಕಾನ್ಸಸ್ (6), ಅಲಬಾಮ (9).
ಮತ ಎಣಿಕೆ ಪ್ರಗತಿಯಲ್ಲಿದ್ದು, ಡೊನಾಲ್ಡ್ ಟ್ರಂಪ್ ಆರಂಭಿಕ ಮುನ್ನಡೆ ಪಡೆದಿದ್ದಾರೆ. ಆದರೆ, ಸಮೀಕ್ಷೆ ಕಮಲಾ ಅವರು ಟ್ರಂಪ್‌ಗಿಂತ ಕೊಂಚ ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದ್ದವು. ಒಂದೊಮ್ಮೆ ಕಮಲಾ ಹ್ಯಾರಿಸ್ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ.
ಅಮೆರಿಕದ ಅಧ್ಯಕ್ಷ ಗಾದಿಗೇರಿದ ಮೊದಲ ಮಹಿಳೆ, ಮೊದಲ ಕಪ್ಪುವರ್ಣೀಯ ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನಿಸಲಿದ್ದಾರೆ
ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರಲ್ಲಿ ಯಾರಿಗೇ ಜನಾದೇಶ ಸಿಕ್ಕರೂ, ಅಮೆರಿಕದೊಂದಿಗೆ ಭಾರತದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಅಮೆರಿಕದಾದ್ಯಂತ ಮಂಗಳವಾರ ಮತದಾನ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಮಾತನಾಡಿರುವ ಜೈಶಂಕರ್, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಹಾಗೂ ಅವರಿಗೂ ಮೊದಲು ಇದ್ದ ನಾಲ್ವರ ಅಧಿಕಾರಾವಧಿಯಲ್ಲೂ ವಾಷಿಂಗ್ಟನ್ ಮತ್ತು ದೆಹಲಿಯ ಸಂಬಂಧ ಸ್ಥಿರವಾದ ಪ್ರಗತಿ ಸಾಧಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ.
ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಸೇರಿದಂತೆ 9 ರಾಜ್ಯಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಇತ್ತ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ನ್ಯೂಯಾರ್ಕ್, ವರ್ಮೊಂಟ್ ಸೇರಿದಂತೆ 5 ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಗತ್ತಿನ ಅತಿದೊಡ್ಡ ಆರ್ಥಿಕತೆ ಮತ್ತು ಪ್ರಬಲ ಮಿಲಿಟರಿ ಶಕ್ತಿ ಎನಿಸಿರುವ ಅಮೆರಿಕದ ಮುಂದಿನ ಅಧ್ಯಕ್ಷರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವಣ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಮತದಾರರು ಯಾರಿಗೆ ವಿಜಯದ ಮಾಲೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.