ವಾಷಿಂಗ್ಟನ್: ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದ ಪ್ರದೇಶದ ಸಮೀಪದಲ್ಲಿ ಎರಡು ಚಾಕು ಹಿಡಿದು ನಿಂತಿದ್ದ ವ್ಯಕ್ತಿಯನ್ನು ಒಹಿಯೊ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು 43 ವರ್ಷದ ಸ್ಯಾಮ್ಯುಯೆಲ್ ಶಾರ್ಪ್ ಎಂದು ಗುರುತಿಸಲಾಗಿದೆ.
'ಆತ ಎರಡು ಕೈಗಳಲ್ಲಿ ಚಾಕು ಹಿಡಿದು ಭೀತಿ ಹುಟ್ಟಿಸಿದ್ದನು. ಪೊಲೀಸರು ನೀಡಿದ ಸೂಚನೆಗಳನ್ನು ಪಾಲಿಸಿರಲಿಲ್ಲ. ವ್ಯಕ್ತಿಯೊಬ್ಬರ ಮೇಲೆ ದಾಳಿಗೆ ಮುಂದಾದಾಗ ಐವರು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ' ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
'ವ್ಯಕ್ತಿಯೊಬ್ಬರ ಜೀವ ಅಪಾಯದಲ್ಲಿತ್ತು. ಹಾಗಾಗಿ ಕ್ರಮ ಕೈಗೊಳ್ಳಲಾಗಿದೆ' ಎಂದು ಮಿಲ್ವಾಕೀ ಪೊಲೀಸ್ ಮುಖ್ಯಸ್ಥ ಜೆಫ್ರಿ ನಾರ್ಮನ್ ತಿಳಿಸಿದ್ದಾರೆ.
ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಶನಿವಾರ ಸಂಜೆ ನಡೆದಿದ್ದ ಚುನಾವಣಾ ಸಮಾವೇಶದಲ್ಲಿ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದರ ಬೆನ್ನಲ್ಲೇ ಆಯೋಜನೆಗೊಂಡಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಸೋಮವಾರ ಪ್ರಾರಂಭವಾಗಿರುವ ಸಮಾವೇಶ ಗುರುವಾರ ಮುಕ್ತಾಯಗೊಳ್ಳಲಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಾಗಿದೆ. ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಒಹಿಯೊ ಸೆನೆಟರ್ ಜೆ.ಡಿ.ವ್ಯಾನ್ಸ್ ಸ್ಪರ್ಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.