ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡರೂ ಅದನ್ನು ಒಪ್ಪಿಕೊಳ್ಳದೆ, ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಗಳನ್ನು ಮಾಡುತ್ತ ಅಧಿಕಾರ ಹಸ್ತಾಂತರಿಸಲು ಒಲ್ಲದ ಮನಸ್ಸಿನಲ್ಲೇ ಶ್ವೇತ ಭವನದಿಂದ ಹೊರ ನಡೆದಿದ್ದಾರೆ ಡೊನಾಲ್ಡ್ ಟ್ರಂಪ್. ನಾಲ್ಕು ವರ್ಷಗಳ ಅಧಿಕಾರ ಅವಧಿಯಲ್ಲಿ ವಿಚಿತ್ರ ಕ್ರಮಗಳಿಂದಾಗಿ ಹಲವು ವಿವಾದಗಳನ್ನು ಮೈಮೇಲೆ ಎಳೆದು ಕೊಂಡ ಟ್ರಂಪ್ ಪಾಲಿಗೆ ಕ್ಯಾಪಿಟಲ್ ಮೇಲಿನ ಗಲಭೆಯು ಇತಿಹಾಸದಲ್ಲಿ ಎಂದೂ ಮಾಸದ ದೊಡ್ಡ ಕಳಂಕದಂತೆ ಅಂಟಿ ಹೋಗಿದೆ. ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಲಿದ್ದಾರೆ. ಅವರೊಂದಿಗೆ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೋವಿಡ್–19 ಪರಿಸ್ಥಿತಿಯ ನಿಯಂತ್ರಣ ಪ್ರಸ್ತುತ ಅಮೆರಿಕ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ಬೈಬಲ್ ಮೇಲೆ ಪ್ರಮಾಣ
ಜೋ ಬೈಡನ್ (78) ಮತ್ತು ಕಮಲಾ ಹ್ಯಾರಿಸ್ (56) ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ (ಅಮೆರಿಕದಲ್ಲಿ ಮಧ್ಯಾಹ್ನ 12ರ ನಂತರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಬೈಡನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಕಮಲಾ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಕುಟುಂಬದ 127 ವರ್ಷ ಹಳೆಯದಾದ ಬೈಬಲ್ ಮೇಲೆ ಬೈಡನ್ ಪ್ರಮಾಣ ಮಾಡಲಿದ್ದು, ಅವರ ಪತ್ನಿ ಜಿಲ್ ಬೈಡನ್ ಅದನ್ನು ಹಿಡಿದಿರುತ್ತಾರೆ. ಕಮಲಾ ಹ್ಯಾರಿಸ್ ಎರಡು ಬೈಬಲ್‌ಗಳ ಮೇಲೆ ಪ್ರಮಾಣ ಮಾಡಲಿದ್ದಾರೆ. ಒಂದು ಕಮಲಾ ಅವರ ಕುಟುಂಬದ ಆಪ್ತ ಸ್ನೇಹಿತೆ ರೆಜಿನಾ ಶೆಲ್ಟನ್ ಅವರಿಗೆ ಸೇರಿದ್ದು, ಮತ್ತೊಂದು ಸುಪ್ರೀಂ ಕೋರ್ಟ್‌ನ ಮೊದಲ ಆಫ್ರಿಕನ್ ಅಮೆರಿಕನ್ ನ್ಯಾಯಮೂರ್ತಿ ಥರ್ಗುಡ್ ಮಾರ್ಷಲ್ ಅವರದ್ದು.
ಬುಧವಾರ ಬೆಳಿಗ್ಗೆ 11 ಗಂಟೆಗೆ (ಅಮೆರಿಕ ಕಾಲಮಾನ) ಹೊಸ ಸರ್ಕಾರದ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಬೈಡನ್ ಕುಟುಂಬದ ಆಪ್ತರಾದ ಜೀಸಸ್ ಸೊಸೈಟಿಯ ಪಾದ್ರಿ ಲಿಯೊ ಜೆರೆಮಿಯಾ ಒ'ಡನೊವನ್ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಗ್ನಿಶಾಮಕ ರಕ್ಷಣಾ ಇಲಾಖೆಯ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳಾ ಕ್ಯಾಪ್ಟನ್ ಆ್ಯಂಡ್ರಿಯಾ ಹಾಲ್ ಅವರು ಅಮೆರಿಕ ರಾಷ್ಟ್ರಧ್ವಜಕ್ಕೆ ಬದ್ಧರಾಗಿ ಮಾಡುವ ಪ್ರತಿಜ್ಞೆಯನ್ನು ವಾಚಿಸಲಿದ್ದಾರೆ.
ಗಾಯಕಿ ಮತ್ತು ನೃತ್ಯಗಾರ್ತಿ ಲೇಡಿ ಗಾಗಾ ರಾಷ್ಟ್ರಗೀತೆ ಹಾಡಲಿದ್ದಾರೆ. ದೇಶದ ಮೊದಲ ಯುವ ಕವಯಿತ್ರಿ (2017) ಅಮಂಡಾ ಗಾರ್ಮನ್ ಕವನ ವಾಚನ ಮಾಡಲಿದ್ದಾರೆ. ನಟಿ ಮತ್ತು ಗಾಯಕಿ ಜೆನಿಫರ್ ಲೊಪೇಜ್ ಪ್ರದರ್ಶನ ಸಹ ಇರಲಿದೆ. ದೈವಾನುಗ್ರಹ ಕೋರಿ ಆಫ್ರಿಕಲ್ ಮೆಥಾಡಿಸ್ಟ್ ಎಪಿಸ್ಕೋಪಲ್ ಚರ್ಚ್‌ನ ಪಾದ್ರಿ ಸಿಲ್ವೆಸ್ಟರ್ ಬೇಮನ್ ಪ್ರಾರ್ಥನೆ ಮಾಡಲಿದ್ದಾರೆ.
ಮಾಜಿ ಅಧ್ಯಕ್ಷರು ಭಾಗಿ
ವಾಷಿಂಗ್ಟನ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗುವುದಾಗಿ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಖಚಿತಪಡಿಸಿದ್ದು, ಲಾರಾ ಬುಷ್ ಸಹ ಜೊತೆಯಲ್ಲಿರುತ್ತಾರೆ. ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಹಾಗೂ ಮಿಷೆಲ್ ಒಮಾಬಾ ಮತ್ತು ಹಿಲರಿ ಕ್ಲಿಂಟನ್ ಭಾಗಿಯಾಗುವ ನಿರೀಕ್ಷೆ ಇದೆ. ಅಮೆರಿಕದ ಹಿರಿಯ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ (96) ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಅವರು 1977ರಲ್ಲಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರದ ಎಲ್ಲ ಅವಧಿಯ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮಗಳಲ್ಲಿ ಹಾಜರಿದ್ದರು.
ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅದಾಗಲೇ ವಾಷಿಂಗ್ಟನ್ ತೊರೆದು ಅವರ ರೆಸಾರ್ಟ್‌ಗೆ ಹೋಗಿದ್ದಾರೆ.
ಕೋವಿಡ್–19 ಕಾರಣದಿಂದಾಗಿ ಈ ಬಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಟಿಕೆಟ್‌ಗಳನ್ನು ಪ್ರಕಟಿಸಿಲ್ಲ. ಗುಂಪು ಗೂಡದಂತೆ ತಡೆಯಲು ಜನರು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ಆಗ್ರಹಿಸಲಾಗಿದೆ.
ಶ್ವೇತ ಭವನದತ್ತ....
ಪ್ರಮಾಣ ವಚನ ಸ್ವೀಕಾರದ ಬಳಿಕ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಕ್ಯಾಪಿಟಲ್‌ನಲ್ಲಿ ಮಿಲಿಟರಿ ಸದಸ್ಯರೊಂದಿಗೆ ಸಾಂಪ್ರದಾಯಿಕ ಭೇಟಿ ನಡೆಯಲಿದೆ. ಹೊಸ ಸೇನಾ ಕಮಾಂಡರ್‌ಗೆ ಅಧಿಕಾರ ಹಸ್ತಾಂತರ ಆಗಲಿದೆ. ಅಲ್ಲಿ ಅರ್ಲಿಂಗ್ಟನ್ ರಾಷ್ಟ್ರೀಯ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ, ಯೋಧರ ಸ್ಮಾರಕಗಳಿಗೆ ಗೌರವ ಸಲ್ಲಿಸಲಿದ್ದಾರೆ. ಅಲ್ಲಿಂದ ಶ್ವೇತ ಭವನಕ್ಕೆ ಬರುತ್ತಿದ್ದಂತೆ, ಅಧ್ಯಕ್ಷರಿಗೆ ವಿಶೇಷ ಅಂಗರಕ್ಷಕ ಪಡೆ ಜೊತೆಯಾಗಲಿದೆ. ಆನ್‌ಲೈನ್‌ನಲ್ಲಿ ಅಮೆರಿಕದ ಎಲ್ಲ 56 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಿಂದ ಪ್ರದರ್ಶನ ನಡೆಯಲಿದೆ.
ಜನವರಿ 20ರಿಂದ ಅಧಿಕಾರ
ಸಂವಿಧಾನದ 20ನೇ ತಿದ್ದುಪಡಿ ಅನ್ವಯ ಅಮೆರಿಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯು ಚುನಾವಣೆಯ ನಂತರದ ಜನವರಿ 20ರಿಂದ ಆರಂಭವಾಗಲಿದೆ. ಅವರು ಪ್ರಮಾಣ ವಚನ ಸ್ವೀಕರಿಸದೆಯೇ ಅಧಿಕಾರ ವಹಿಸುವಂತಿಲ್ಲ. ಇದೇ ಸಂದರ್ಭದಲ್ಲಿ ಹೊಸ ಆಡಳಿತಕ್ಕೆ ಅಗತ್ಯವಿರುವ ಹಣ ಸಂಗ್ರಹ ಮಾಡುವ ಅವಕಾಶವೂ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.