ADVERTISEMENT

US Elections | ಅರಿಜೋನಾ ಸೇರಿ 7 ನಿರ್ಣಾಯಕ ರಾಜ್ಯಗಳಲ್ಲಿ ಗೆದ್ದು ಬೀಗಿದ ಟ್ರಂಪ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 5:56 IST
Last Updated 10 ನವೆಂಬರ್ 2024, 5:56 IST
<div class="paragraphs"><p>  ಕಮಲಾ ಹ್ಯಾರಿಸ್&nbsp;ಹಾಗೂ ಡೊನಾಲ್ಡ್ ಟ್ರಂಪ್</p></div>

ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್

   

ಪಿಟಿಐ ಚಿತ್ರಗಳು

ವಾಷಿಂಗ್ಟನ್‌: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅರಿಜೋನಾ ರಾಜ್ಯದಲ್ಲೂ ಗೆಲುವು ಪಡೆದಿದ್ದಾರೆ. ಈ ಮೂಲಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ನಿರ್ಧರಿಸುವಲ್ಲಿ ‘ನಿರ್ಣಾಯಕ’ ಎನಿಸಿರುವ ಎಲ್ಲ ಏಳು ರಾಜ್ಯಗಳಲ್ಲೂ ಜಯಭೇರಿ ಸಾಧಿಸಿದ್ದಾರೆ.

ADVERTISEMENT

ಅಮೆರಿಕದಲ್ಲಿ 50 ರಾಜ್ಯಗಳಿವೆಯಾದರೂ ಏಳು ರಾಜ್ಯಗಳಾದ ಅರಿಜೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ನೆವಾಡಾ, ಜಾರ್ಜಿಯಾ, ಮಿಷಿಗನ್ ಮತ್ತು ವಿಸ್ಕಾನ್‌ಸಿನ್‌ನ ಮತಗಳು ನಿರ್ಣಾಯಕವಾಗಿವೆ.

ಅರಿಜೋನಾ ರಾಜ್ಯದ ಗೆಲುವಿನೊಂದಿಗೆ ಟ್ರಂಪ್‌, 312 ಎಲೆಕ್ಟರ್‌ಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರಿಗೆ 226 ಎಲೆಕ್ಟರ್‌ಗಳ ಬೆಂಬಲ ದೊರೆತಿದೆ. ಅರಿಜೋನಾದಲ್ಲಿ 11 ಎಲೆಕ್ಟರಲ್‌ ಕಾಲೇಜ್‌ ಮತಗಳು ಇವೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್‌ಗಳ ಪೈಕಿ 270 ಎಲೆಕ್ಟರ್‌ಗಳ ಬೆಂಬಲದ ಅಗತ್ಯವಿತ್ತು.

ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷವು ಸೆನೆಟ್‌ನಲ್ಲಿ 52 ಸ್ಥಾನಗಳನ್ನು ಹಾಗೂ ಡೆಮಾಕ್ರಟಿಕ್‌ ಪಕ್ಷ 47 ಸ್ಥಾನಗಳನ್ನು ಹೊಂದಿದೆ.

2020ರಲ್ಲಿ ಅರಿಜೋನಾ ರಾಜ್ಯವನ್ನು ಜೋ ಬೈಡನ್‌ ಗೆದ್ದಿದ್ದರು. ಮಾತ್ರವಲ್ಲ, ಬಿಲ್‌ ಕ್ಲಿಂಟನ್‌ ಬಳಿಕ (1996) ಈ ರಾಜ್ಯವನ್ನು ಗೆದ್ದ ಡೆಮಾಕ್ರಟಿಕ್‌ ಪಕ್ಷದ ಮೊದಲ ಅಭ್ಯರ್ಥಿ ಎನಿಸಿಕೊಂಡಿದ್ದರು. 

ಕಳೆದ ಚುನಾವಣೆಯಲ್ಲಿ ಟ್ರಂಪ್‌ ಅವರು ಏಳು ‘ನಿರ್ಣಾಯಕ’ ರಾಜ್ಯಗಳಲ್ಲಿ ನಾರ್ತ್‌ ಕೆರೊಲಿನಾದಲ್ಲಿ ಮಾತ್ರ ಗೆಲುವು ಪಡೆದಿದ್ದರು. ಇತರ ಆರು ರಾಜ್ಯಗಳಲ್ಲಿ ಬೈಡನ್‌ ಜಯ ಸಾಧಿಸಿದ್ದರು. ಕಳೆದ ಬಾರಿ ಡೆಮಾಕ್ರಟಿಕ್‌ ಪಕ್ಷ ತನ್ನದಾಗಿಸಿಕೊಂಡಿದ್ದ ಎಲ್ಲ ಆರೂ ರಾಜ್ಯಗಳನ್ನು ಟ್ರಂಪ್‌ ಈ ಬಾರಿ ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದಾರೆ.

ಟ್ರಂಪ್‌ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಮುಂದಿನ ವರ್ಷ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ನ.13ರಂದು ಬೈಡನ್‌–ಟ್ರಂಪ್‌ ಭೇಟಿ

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ನ.13ರಂದು ಶ್ವೇತಭವನದಲ್ಲಿ ಆಯೋಜಿಸಿರುವ ಸಭೆಗೆ ಬರುವಂತೆ ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಿದ್ದಾರೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಈ ಭೇಟಿಯೊಂದಿಗೆ ಔಪಚಾರಿಕವಾಗಿ ಆರಂಭವಾಗಲಿದೆ. ‘ಬೈಡನ್‌ ಮತ್ತು ಟ್ರಂಪ್‌ ಅವರು ಶ್ವೇತಭವನದ ಓವಲ್‌ ಕಚೇರಿಯಲ್ಲಿ (ಅಧ್ಯಕ್ಷರ ಕಚೇರಿ) ನ.13ರಂದು ಬೆಳಿಗ್ಗೆ 11ಕ್ಕೆ ಭೇಟಿಯಾಗಲಿದ್ದಾರೆ’ ಎಂದು ಶ್ವೇತಭವನದ ವಕ್ತಾರೆ ಕರೀನ್‌ ಜಾನ್‌ ಪಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಲಿ ಅಧ್ಯಕ್ಷರು ಮತ್ತು ಚುನಾಯಿತ ಅಧ್ಯಕ್ಷರ ನಡುವಿನ ಸಭೆ ಔಪಚಾರಿಕ ಆಗಿದ್ದು ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಈ ಭೇಟಿಯ ವೇಳೆ ಹಾಲಿ ಅಧ್ಯಕ್ಷರು ಚುನಾಯಿತ ಅಧ್ಯಕ್ಷರಿಗೆ ದೇಶದ ಪ್ರಮುಖ ಕಾರ್ಯಸೂಚಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.