ADVERTISEMENT

US President Election | ಇದು ಅಮೆರಿಕದ ಸ್ವರ್ಣಯುಗ: ಟ್ರಂಪ್ ಹರ್ಷೋದ್ಗಾರ

ಪಿಟಿಐ
Published 6 ನವೆಂಬರ್ 2024, 9:43 IST
Last Updated 6 ನವೆಂಬರ್ 2024, 9:43 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ‘ಇದು ಅಮೆರಿಕದ ಸ್ವರ್ಣಯುಗ’

ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸನಿಹವಾಗಿರುವಂತೆಯೇ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ ಮಾತಿದು.

ಪ್ಲೊರಿಡಾದ ವೆಸ್ಟ್ ‍ಪಾಮ್ ಬೀಚ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಮೆರಿಕ ನಮಗೆ ಅಭೂತ‍ಪೂರ್ವ ಹಾಗೂ ಶಕ್ತಿಯುತ ಜನಾದೇಶವನ್ನು ನೀಡಿದೆ’ ಎಂದು ತಮ್ಮ ಗೆಲುವನ್ನು ಘೋಷಿಸಿಕೊಂಡರು. ಅವರ ಮಾತಿಗೆ ಅಭಿಮಾನಿಗಳ ಚಪ್ಪಾಳೆ ಹಾಗೂ ಹರ್ಷೋದ್ಗಾರ ಮೊಳಗಿತು. ಭಾಷಣದ ವೇಳೆ ಅವರ ಜೊತೆ ಕುಟುಂಬದ ಸದಸ್ಯರೂ ಇದ್ದರು.

‘ಇದು ಅಮೆರಿಕ ಜನರಿಗೆ ಸಂದ ಅಭೂತಪೂರ್ವ ಗೆಲುವು. ಇಂಥ ಚಳವಳಿ ಹಿಂದೆಂದೂ ನಡೆದಿಲ್ಲ. ನಿಜ ಹೇಳಬೇಕು ಎಂದರೆ, ನನ್ನ ಪ್ರಕಾರ ಇದು ಸಾರ್ವಕಾಲಿಕ ರಾಜಕೀಯ ಆಂದೋಲನ. ಈ ಥರಹದ ಸಂಚಲನ ದೇಶದಲ್ಲಿ ಹಿಂದೆಂದೂ ಆಗಿರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

‘ಇದು ಈಗ ಮತ್ತೊಂದು ಪ್ರಮುಖ ಘಟ್ಟಕ್ಕೆ ತಲುಪಲಿದೆ, ಏಕೆಂದರೆ ನಾವು ದೇಶವನ್ನು ಸರಿಪಡಿಸಲು ಮುಂದಾಗುತ್ತಿದ್ದೇವೆ. ನಾವು ನಮ್ಮ ದೇಶವನ್ನು ಸರಿಪಡಿಸುತ್ತೇವೆ. ದೇಶಕ್ಕೆ ನಮ್ಮ ಸಹಾಯ ಬೇಕಿದೆ’ ಎಂದು ಟ್ರಂಪ್ ನುಡಿದಿದ್ದಾರೆ.

‘ನಮ್ಮ ಗಡಿಯನ್ನು ಸರಿಪಡಿಸಲಿದ್ದೇವೆ. ನಮ್ಮ ದೇಶಕ್ಕೆ ಸೇರಿದ ಎಲ್ಲವನ್ನೂ ನಾವು ಸರಿ ಮಾಡಲಿದ್ದೇವೆ. ನಾವು ಇಂದು ಇತಿಹಾಸ ರಚಿಸಿದ್ದೇವೆ. ಅಸಾಧ್ಯವೆನಿಸಿದ ಅಡೆತಡೆಗಳನ್ನು ದಾಟಿ ಜಯಿಸಿದ್ದೇವೆ. ನಂಬಲಾಗದ ರಾಜಕೀಯ ವಿಜಯ ಸಾಧಿಸಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

‘ದೇಶದ 47ನೇ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ ಅಮೆರಿಕ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ನಿಮಗಾಗಿ, ನಿಮ್ಮ ಕುಟುಂಬ ಹಾಗೂ ಭವಿಷ್ಯಕ್ಕಾಗಿ ಹೋರಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

‘ನನ್ನ ದೇಹದಲ್ಲಿ ಉಸಿರಿರುವವರೆಗೂ ನಾನು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವು, ನಿಮ್ಮ ಮಕ್ಕಳು ಬಯಸುವ ಬಲಿಷ್ಠ ಹಾಗೂ ಸುರಕ್ಷಿತ ಅಮೆರಿಕ ಸಾಕ್ಷಾತ್ಕಾರವಾಗುವವರೆಗೆ ನಾನು ವಿರಮಿಸುವುದಿಲ್ಲ. ಇದು ನಿಜವಾಗಿಯೂ ಅಮೆರಿಕದ ಸ್ವರ್ಣಯುಗವಾಗಿರಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.