ಬೆಂಗಳೂರು: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್ ಪಡೆಗಳು ನಡೆಸಿದ ದಾಳಿಯಲ್ಲಿ ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಸಾವಿಗೀಡಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ.
ಅಮೆರಿಕದ ಶ್ವೇತಭವನದಿಂದ ಮಾತನಾಡಿರುವ ಬೈಡೆನ್, ಉಗ್ರನಿಗ್ರಹ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆಗಳು ಯಶಸ್ವಿಯಾಗಿವೆ. ಸೆಪ್ಟೆಂಬರ್ 11, 2001ರಲ್ಲಿ ನಡೆದಿದ್ದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಪ್ರಮುಖ ಸಂಚುಕೋರನನ್ನು ನಾವು ಸದೆಬಡಿದಿದ್ದೇವೆ ಎಂದು ಹೇಳಿದ್ದಾರೆ.
ಉಗ್ರಸಂಘಟನೆಯ ನಾಯಕ ಹತ್ಯೆಯಾಗಿದ್ದಾನೆ. ಇದರೊಂದಿಗೆ ನಮಗೆ ನ್ಯಾಯ ಲಭಿಸಿದೆ. ನಮ್ಮ ಜನರಿಗೆ ನೀನು ಬೆದರಿಕೆ ಒಡ್ಡಿದ್ದರೆ, ಎಲ್ಲಿದ್ದರೂ ಬಿಡುವುದಿಲ್ಲ. ಎಷ್ಟು ಸಮಯ ತಗುಲಿದರೂ ಸರಿಯೇ, ಎಲ್ಲಿ ಅಡಗಿದ್ದರೂ ಸರಿ, ನಾವು ಹುಡುಕಿ ನಿನ್ನನ್ನು ಇಲ್ಲವಾಗಿಸುತ್ತೇವೆ ಎಂದು ಬೈಡೆನ್ ವಿಶೇಷ ಹೇಳಿಕೆಯಲ್ಲಿ ತಿಳಿಸಿದ್ದಾರೆ.
9/11ರ ದಾಳಿಯಲ್ಲಿ ಝವಾಹಿರಿ ಪ್ರಮುಖ ಪಾತ್ರ ವಹಿಸಿದ್ದನು. 1998ರಲ್ಲಿ ಕೀನ್ಯಾ ಮತ್ತು ತಾಂಜಾನಿಯದಲ್ಲಿ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಯಲ್ಲೂ ಆತ ಸಂಚು ರೂಪಿಸಿದ್ದನು ಎಂದು ಬೈಡೆನ್ ಹೇಳಿದ್ದಾರೆ.
ಅಮೆರಿಕದ ನಾಗರಿಕರು, ಅಧಿಕಾರಿಗಳು, ಸೇನಾ ಪಡೆ ಮತ್ತು ರಾಯಭಾರಿಗಳನ್ನು ಆತ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದನು. ಅದಕ್ಕಿಂದು ಅಂತ್ಯ ಹಾಡಿದ್ದೇವೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ಬೈಡೆನ್ ವಿವರಿಸಿದ್ದಾರೆ.
ಸಿಐಎ ನಡೆಸಿರುವ ವಿಶೇಷ ಡ್ರೋನ್ ಕಾರ್ಯಾಚರಣೆಯಲ್ಲಿ ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ.
2011ರಲ್ಲಿ ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ಆಯ್ಮಾನ್ ಅಲ್ ಝವಾಹಿರಿ, ಉಗ್ರ ಸಂಘಟನೆ ಅಲ್‌ಕೈದಾ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ. ಜತೆಗೆ, ಅಮೆರಿಕದ ಮೇಲೆ ಸಂಘಟಿತ ದಾಳಿಗೆ ನಿರ್ದೇಶನ ನೀಡುತ್ತಿದ್ದ.
ಅದಾದ ಬಳಿಕ ಅಮೆರಿಕ, ಆಯ್ಮಾನ್ ಅಲ್ ಝವಾಹಿರಿಯ ನಡೆ ಮೇಲೆ ಕಣ್ಣಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.