ADVERTISEMENT

ನಾನು ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ, ಗೆಲುವು ಸಾಧಿಸುತ್ತೇನೆ: ಜೋ ಬೈಡನ್

ಪಿಟಿಐ
Published 6 ಜುಲೈ 2024, 1:58 IST
Last Updated 6 ಜುಲೈ 2024, 1:58 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಣದಿಂದ ಹಿಂದೆ ಸರಿಯುತ್ತಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಮತ್ತೆ ಪುನರುಚ್ಚರಿಸಿದ್ದಾರೆ.

ADVERTISEMENT

'ನಾನೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದು, ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ' ಎಂದು ಹೇಳಿದ್ದಾರೆ.

ಇದರೊಂದಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗೆ ಸಂಬಂಧಿಸಿದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ನಡುವಣ ಮುಖಾಮುಖಿ ಚರ್ಚೆಯಲ್ಲಿ ಬೈಡನ್ ಹಿನ್ನಡೆ ಅನುಭವಿಸಿದ್ದರು. ಇದರಿಂದ ಡೆಮಾಕ್ರಟಿಕ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ಉಂಟಾಗಿದ್ದು, ಬೈಡನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂಬ ಬೇಡಿಕೆ ಕೇಳಿಬಂದಿತ್ತು.

ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ...

ಟ್ರಂಪ್ ಜೊತೆಗಿನ ಮುಖಾಮುಖಿ ಚರ್ಚೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಜೋ ಬೈಡನ್ ಒಪ್ಪಿಕೊಂಡಿದ್ದಾರೆ.

'ಆ ಬಳಿಕ ತುಂಬಾ ಊಹಾಪೋಹಗಳು ಹರಡುತ್ತಿವೆ. ನಾನು ಸ್ಪರ್ಧಾ ಕಣದಲ್ಲಿ ಉಳಿಯುತ್ತೇನೆಯೇ ಎಂಬ ಕುರಿತು ಅನುಮಾನಗಳು ಮೂಡಿವೆ. ಅದಕ್ಕೆಲ್ಲ ನಾನೀಗ ಉತ್ತರ ನೀಡುತ್ತಿದ್ದು, ನಾನು ಸ್ಪರ್ಧಾ ಕಣದಲ್ಲಿದ್ದು, ಮತ್ತೆ ಚುನಾವಣೆ ಎದುರಿಸಿ ಗೆಲ್ಲುತ್ತೇನೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಾನು ಅಮೆರಿಕದ ಅಧ್ಯಕ್ಷ. 2020ರಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದೆ. ಡೆಮಾಕ್ರಟಿಕ್ ಪಕ್ಷದ ಲಕ್ಷಾಂತರ ಮಂದಿ ನನಗೆ ಮತ ಹಾಕಿದ್ದರಿಂದ ಗೆದ್ದು ಬಂದಿದ್ದೇನೆ. ಅಂದು ಕೂಡ ನನಗೆ ನೀವೇ ಮತ ಹಾಕಿದ್ದೀರಿ' ಎಂದು ಹೇಳಿದ್ದಾರೆ.

'ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ. 2020ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದ್ದೇನೆ. 2024ರಲ್ಲಿ ಮತ್ತೆ ಸೋಲಿಸುತ್ತೇನೆ' ಎಂದು ಹೇಳಿದ್ದಾರೆ.

90 ನಿಮಿಷಗಳ ಚರ್ಚೆಯು ನಾನು ಮಾಡಿದ ಮೂರೂವರೆ ವರ್ಷಗಳ ಕೆಲಸವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಸಾಂಕ್ರಾಮಿಕ ಕಾಲಘಟ್ಟದಲ್ಲೂ ಪ್ರಬಲ ಆರ್ಥಿಕತೆಯಾಗಿ ದೇಶವನ್ನು ಮುನ್ನಡೆಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

'ನನ್ನ ವಯಸ್ಸಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನನಗೆ ವಯಸ್ಸಾಗಿದೆ ಎಂದು ಕೇಳಿದ್ದೇನೆ. ಆದರೆ 81ರ ಹರೆಯದಲ್ಲೂ ಉತ್ತಮ ಆಡಳಿತ ನೀಡಲು ಸಮರ್ಥನಾಗಿದ್ದೇನೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.