ವಾಷಿಂಗ್ಟನ್: ನವೆಂಬರ್ 5ರಂದು ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಹಿಂದೆ ಸರಿಯಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಕನಿಷ್ಠ ಐವರು ಸಂಸದರು ಆಗ್ರಹಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಜೂನ್ 27ರಂದು ಅಟ್ಲಾಂಟದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ನಡೆದ ಸಂವಾದದಲ್ಲಿ ಜೋ ಬೈಡನ್ ಅವರ ಕೆಟ್ಟ ಪ್ರದರ್ಶನದ ಬಗ್ಗೆ ಚರ್ಚಿಸಲು ನಡೆಸಲಾದ ಸಭೆಯಲ್ಲಿ ಸಂಸದರಾದ ಜೆರಿ ನಾಡ್ಲೆರ್, ಮಾರ್ಕ್ ಟಕಾನೊ, ಜೊ ಮೊರೆಲ್, ಟೆಡ್ ಲಿಯು ಹಾಗೂ ಆಡಂ ಸ್ಮಿತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ 27ರ ಸಂವಾದದ ಬಳಿಕ ಬದಲಾಗುತ್ತಿರುವ ರಾಜಕೀಯ ವಾತಾವರಣದ ಬಗ್ಗೆ ಡೆಮಾಕ್ರಟಿಕ್ ಪಕ್ಷದ ಸಭಾನಾಯಕ ಹಕೀಂ ಜೆಫ್ರಿ ಅವರು ಕರೆದಿದ್ದ ವರ್ಚ್ಯುವಲ್ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಬೈಡನ್ ಅವರ ಉಮೇದುವಾರಿಕೆಯನ್ನು ಅನುಮೋದಿಸುವ ಬಗ್ಗೆ ಸಂಸದರಿಂದ ಅಭಿಪ್ರಾಯ ಸಂಗ್ರಹಿಸಲು ಈ ಸಭೆ ನಡೆಸಲಾಗಿತ್ತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಬೈಡನ್ ಸ್ಪರ್ಧೆಯಿಂದ ಹಿಂದೆಸರಿಯಬೇಕು ಎನ್ನುವ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಗಿದೆ.
‘ಬೈಡನ್ ಅವರಿಗೆ ನಿರ್ಗಮಿಸುವ ಸಮಯ ಬಂದಿದೆ’ ಎಂದು ಸಂಸದ ಸ್ಮಿತ್ ಹೇಳಿದ್ದಾಗಿ, ಈ ಬಗ್ಗೆ ಮಾಹಿತಿ ಇರುವ ಇಬ್ಬರು ತಿಳಿಸಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಚುನಾವಣಾ ಸ್ಪರ್ಧೆಯಿಂದ ಬೈಡನ್ ಅವರು ನಿರ್ಗಮಿಸಬೇಕು ಎಂದು ಇತರ ನಾಲ್ವರು ಅಭಿಪ್ರಾಯಪಟ್ಟಿದ್ದಾರೆ.
ಬೈಡನ್ ಅವರು ಮರು ಆಯ್ಕೆ ಬಯಸಬಾರದು ಎಂದು ಡೆಮಾಕ್ರಟಿಕ್‌ನ ಹಿರಿಯ ನಾಯಕ ಟೆಡ್ ಲಿಯು ಹೇಳಿದ್ದಾಗಿ ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಅಟ್ಲಾಂಟ ಸಂವಾದದ ಬಗ್ಗೆ ಖುದ್ದು ಬೈಡನ್ ಅವರೇ ಅತೃಪ್ತಿ ವ್ಯಕ್ತಪಡಿಸಿದ್ದರು. ಅದೊಂದು ‘ಕೆಟ್ಟ ರಾತ್ರಿ’ ಎಂದು ಹೇಳಿದ್ದರು. ಅಟ್ಲಾಂಟ ಸಂವಾದದ ಬಳಿಕ ಬೈಡನ್ ಅವರ ಅನುಮೋದನೆ ರೇಟಿಂಗ್ ಇಳಿಕೆಯಾಗಿತ್ತು.
ಬೈಡನ್ ಅವರ ಆರೋಗ್ಯ ಹಾಗೂ ಮುಂದಿನ ನಾಲ್ಕು ವರ್ಷಗಳ ಕಾಲ ಅಮೆರಿಕವನ್ನು ಆಳ್ವಿಕೆ ಮಾಡುವ ಸಾಮರ್ಥ್ಯವನ್ನು ತಮ್ಮದೇ ಪಕ್ಷದವರು ಪ್ರಶ್ನೆ ಮಾಡಿದ್ದರು. ಆದರೆ ತಾನು ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಲ್ಲಿ ಉಳಿಯುವುದಾಗಿ ಹೇಳಿರುವ ಬೈಡನ್, ಚುನಾವಣೆಯಲ್ಲಿ ಟ್ರಂಪ್ ಅವರನ್ನು ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.