ADVERTISEMENT

ಚುನಾವಣಾ ಪ್ರಚಾರಕ್ಕೆ ₹837 ಕೋಟಿ ದೇಣಿಗೆ ಸಂಗ್ರಹಿಸಿದ ಕಮಲಾ ಹ್ಯಾರಿಸ್‌

ಪಿಟಿಐ
Published 24 ಜುಲೈ 2024, 13:58 IST
Last Updated 24 ಜುಲೈ 2024, 13:58 IST
<div class="paragraphs"><p>ವಿಸ್ಕಾನ್‌ಸಿನ್‌ನ ವೆಸ್ಟ್ ಅಲ್ಲಿಸ್‌ನಲ್ಲಿರುವ ವೆಸ್ಟ್ ಅಲ್ಲಿಸ್ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರದ ತಮ್ಮ ಮೊದಲ ರ‍್ಯಾಲಿಯಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು</p></div>

ವಿಸ್ಕಾನ್‌ಸಿನ್‌ನ ವೆಸ್ಟ್ ಅಲ್ಲಿಸ್‌ನಲ್ಲಿರುವ ವೆಸ್ಟ್ ಅಲ್ಲಿಸ್ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರದ ತಮ್ಮ ಮೊದಲ ರ‍್ಯಾಲಿಯಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರಕ್ಕಾಗಿ 11 ಲಕ್ಷಕ್ಕೂ ಹೆಚ್ಚು ಜನರಿಂದ ಸುಮಾರು ₹837 ಕೋಟಿ ಹಣ ಸಂಗ್ರಹಿಸಿದ್ದಾರೆ. ಇದು ಕಮಲಾ ಪರ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿರುವುದರ ಸೂಚನೆಯಾಗಿದೆ.

ADVERTISEMENT

‘ಭಾನುವಾರ ಮಧ್ಯಾಹ್ನದಿಂದ ಸೋಮವಾರ ಸಂಜೆಯವರೆಗೆ ಹ್ಯಾರಿಸ್ ತಂಡವು ₹837 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಭಾನುವಾರದಿಂದ 11 ಲಕ್ಷಕ್ಕೂ ಹೆಚ್ಚು ಜನರು ದೇಣಿಗೆ ನೀಡಿದ್ದಾರೆ. ಇವರಲ್ಲಿ ಶೇ 62ರಷ್ಟು ಜನರು ಮೊದಲ ಬಾರಿಗೆ ದೇಣಿಗೆ ನೀಡಿದ ದಾನಿಗಳಾಗಿದ್ದಾರೆ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಮತ್ತು ಜಂಟಿ ನಿಧಿಸಂಗ್ರಹಣೆ ಸಮಿತಿಗಳ ಮೂಲಕ ಸಂಗ್ರಹಿಸಿದ ಹಣವು ದೇಶದಾದ್ಯಂತ ನಡೆಯುತ್ತಿರುವ ಅಭಿಯಾನದ ಭರಾಟೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹ್ಯಾರಿಸ್ ಪರ ಪ್ರಚಾರ ನಡೆಸುತ್ತಿರುವ ತಂಡವು ಹೇಳಿದೆ.  

‘ಹ್ಯಾರಿಸ್‌ ತಂಡವು ದೇಣಿಗೆ ಸಂಗ್ರಹ ಅಭಿಯಾನದ ಮೊದಲ 24 ತಾಸುಗಳಲ್ಲಿ ದಾಖಲೆಯ ₹678 ಕೋಟಿಯನ್ನು ಸಂಗ್ರಹಿಸಿದೆ. ತಳಮಟ್ಟದ 8.88 ಲಕ್ಷ ದಾನಿಗಳು ದೇಣಿಗೆ ನೀಡುವ ಮೂಲಕ ಇತಿಹಾಸದಲ್ಲಿ ಯಾವುದೇ ಅಭ್ಯರ್ಥಿಗಿಂತಲೂ ಕಮಲಾ ಹ್ಯಾರಿಸ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ದಾಖಲಾಗಿದೆ’ ಎಂದು ಅದು ಹೇಳಿದೆ.

‘ಕಮಲಾ ಹ್ಯಾರಿಸ್ ಅವರ ಬೆನ್ನಿಗೆ ಈಗ ದೊಡ್ಡ ಜನಬೆಂಬಲದ ಶಕ್ತಿ ಇದೆ. ಅಪರಾಧಿ ಡೊನಾಲ್ಡ್ ಟ್ರಂಪ್ ಅವರ ವಿಭಜಕ, ಜನಪ್ರಿಯವಲ್ಲದ ಕಾರ್ಯಸೂಚಿಯು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಆಡಳಿತದ ದಾಖಲೆ ಮತ್ತು ಅವರ ದೂರದೃಷ್ಟಿಯ ಎದುರು ನಿಲ್ಲುವುದಿಲ್ಲವೆಂಬುದು ದೇಶದ ಜನತೆಗೆ ಗೊತ್ತಾಗಿದೆ. ಅಲ್ಲದೆ, 30,000ಕ್ಕೂ ಹೆಚ್ಚು ಸ್ವಯಂಸೇವಕರು ಹ್ಯಾರಿಸ್‌ ಪರ ಪ್ರಚಾರಕ್ಕೆ ಸಹಿ ಕೂಡ ಹಾಕಿದ್ದಾರೆ’ ಎಂದು ಅಭಿಯಾನದ ತಂಡವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.