ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಪರವಾಗಿ ಅನಿವಾಸಿ ಭಾರತೀಯರು ಪ್ರಚಾರ ಆರಂಭಿಸಿದ್ದಾರೆ.
‘ಇಂಡಿಯನ್ ಅಮೆರಿಕನ್ಸ್ ಫಾರ್ ಹ್ಯಾರಿಸ್’ ಎಂಬ ಹೆಸರಿನಡಿ ಪ್ರಚಾರ ಅಭಿಯಾನ ಆರಂಭಿಸಿರುವ ಅನಿವಾಸಿ ಭಾರತೀಯರು, ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಭಾರತೀಯ ಮೂಲದವರೊಬ್ಬರನ್ನು ಆಯ್ಕೆ ಮಾಡುವ ಗುರಿಯನ್ನು ಹೊಂದಿದ್ದಾರೆ.
‘ಭಾರತ ಮೂಲದ ಮಹಿಳೆಯೊಬ್ಬರ ಪುತ್ರಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿದ್ದಾರೆ. ಅವರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಅಮೆರಿಕದಲ್ಲಿರುವ ಭಾರತೀಯರು ಅವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು’ ಎಂದು ಉತ್ತರ ಕರೋಲಿನದಲ್ಲಿರುವ ಭಾರತ ಮೂಲದ ಉದ್ಯಮಿ ಸ್ವದೇಶ್ ಚಟರ್ಜಿ ಅವರು ಮನವಿ ಮಾಡಿದ್ದಾರೆ.
‘ಉತ್ತರ ಕರೋಲಿನ, ವಿಸ್ಕಾನ್ಸಿನ್, ಮಿಚಿಗನ್, ಪೆನ್ಸಿಲ್ವೇನಿಯಾ, ಅರಿಜೋನಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಪ್ರಚಾರ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಕಮಲಾ ಅವರು ಉಭಯ ಜನಾಂಗೀಯ ಪರಂಪರೆಯ ಪ್ರತೀಕವಾಗಿದ್ದಾರೆ. ಅಮೆರಿಕದಲ್ಲಿನ ಭಾರತೀಯರ ಸಂಖ್ಯೆ 50 ಲಕ್ಷದ ಸನಿಹದಲ್ಲಿದೆ. ಅವರಲ್ಲಿ ಮುಕ್ಕಾಲು ಭಾಗದಷ್ಟು ಜನರು ಅಮೆರಿಕದಲ್ಲೇ ಜನಿಸಿದ್ದಾರೆ. ಇವರೆಲ್ಲ ಹೆಮ್ಮೆಪಡುವ ರೀತಿ ಹ್ಯಾರಿಸ್ ಬೆಳೆದಿದ್ದಾರೆ’ ಎಂದು ಪ್ರಚಾರ ಅಭಿಯಾನದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಹ್ಯಾರಿಸ್ ಅವರ ತಾಯಿ ಭಾರತದ ಚೆನ್ನೈ ಮೂಲದವರಾಗಿದ್ದು, ಜಮೈಕಾ ಮೂಲದ ವ್ಯಕ್ತಿಯನ್ನು ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ.
ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಹ್ಯಾರಿಸ್ ಸ್ಪರ್ಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.