ADVERTISEMENT

US ಅಧ್ಯಕ್ಷೀಯ ಚುನಾವಣೆ: ಕಮಲಾ ಪರ ಅಭಿಯಾನ ಆರಂಭಿಸಿದ ಭಾರತ ಮೂಲದ ಅಮೆರಿಕನ್ನರು

ಪಿಟಿಐ
Published 4 ಸೆಪ್ಟೆಂಬರ್ 2024, 2:41 IST
Last Updated 4 ಸೆಪ್ಟೆಂಬರ್ 2024, 2:41 IST
<div class="paragraphs"><p>ಕಮಲಾ ಹ್ಯಾರಿಸ್‌</p></div>

ಕಮಲಾ ಹ್ಯಾರಿಸ್‌

   

ವಾಷಿಂಗ್ಟನ್‌: ಅಮೆರಿಕದಲ್ಲಿ ಚುನಾವಣಾ ಕಾವು ಜೋರಾಗಿದೆ. ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಎದುರು ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಪ್ರಚಾರ ಆರಂಭಿಸಿದ್ದಾರೆ. ಭಾರತ ಮೂಲ ಇರುವ ಕಮಲಾ ಪರ ಮತಯಾಚನೆಗೆ ಅಭಿಯಾನ ಆರಂಭಿಸಿದ್ದಾರೆ. ಅಮೆರಿಕವನ್ನು ಮುನ್ನಡೆಸುವ ಭಾರತೀಯ ಪರಂಪರೆಯ ಮೊದಲ ವ್ಯಕ್ತಿಯಾಗಿ ಕಮಲಾ ಅವರನ್ನು ಆಯ್ಕೆ ಮಾಡುವ ಮೂಲಕ ಯುಎಸ್‌ ಅಧ್ಯಕ್ಷೀಯ ಚುನಾವಣೆಗಳಲ್ಲಿ ಇತಿಹಾಸವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಪ್ರಚಾರ ಕೈಗೊಂಡ ತಂಡ ಹೇಳಿದೆ.

ADVERTISEMENT

‘ಇದೇ ಮೊದಲು ಬಾರಿಗೆ ಭಾರತ ಮೂಲದ ತಾಯಿಯನ್ನು ಹೊಂದಿರುವ ಅಭ್ಯರ್ಥಿ ಚುನಾವಣಾ ಕಣದಲ್ಲಿರುವುದು. ಅವರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪಡೆದಿದ್ದಾರೆ ಹಾಗೂ ಕಲಿತಿದ್ದಾರೆ. ಕಮಲಾ ಎಂಬ ಹೆಸರಿನವರು ಈ ದೇಶದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸುವುದು ಯುಎಸ್ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಹೀಗಾಗಿ ನಾವು ಭಾರತೀಯ ಅಮೆರಿಕನ್ನರು ಪಕ್ಷದ ಗೆರೆಯನ್ನು ಮೀರಿ ಅವರನ್ನು ಬೆಂಬಲಿಸಬೇಕು ಎಂದು ಭಾವಿಸಿದ್ದೇವೆ. ಕಮಲಾ ಅವರು 2001ರಲ್ಲಿ ಭಾರತ-ಯುಎಸ್ ಸಂಬಂಧವನ್ನು ಬಲಪಡಿಸಲು ನೀಡಿದ ಕೊಡುಗೆಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಪಡೆದಿದ್ದಾರೆ’ ಎಂದು ಉತ್ತರ ಕೆರೊಲಿನಾ ಮೂಲದ ಉದ್ಯಮಿ ಸ್ವದೇಶ್ ಚಟರ್ಜಿ ಪಿಟಿಐಗೆ ತಿಳಿಸಿದ್ದಾರೆ.

ಉತ್ತರ ಕೆರೊಲಿನಾ, ವಿಸ್ಕಾನ್ಸಿನ್‌, ಮಿಷಿಗನ್‌, ಪೆನ್ಸಿಲ್ವೇನಿಯಾ, ಅರಿಜೊನಾ ಮತ್ತು ಜಾರ್ಜಿಯಾ ರಾಜ್ಯಗಳನ್ನು ಪ್ರಮುಖವಾಗಿ ಗುರುತಿಸಲಾಗಿದ್ದು, ಅಲ್ಲಿ ಭಾರತೀಯ ಅಮೆರಿಕನ್ನರನ್ನು ಚುನಾವಣೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ, ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕ ಅಧ್ಯಕ್ಷರನ್ನಾಗಿಸಲು ಮತ ಹಾಕುವಂತೆ ಅಭಿಯಾನ ನಡೆಸಲು ಯೋಜಸಲಾಗಿದೆ ಎಂದು ಚಟರ್ಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.