ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ (ನ.5) ಮತದಾನ ನಡೆಯಲಿದೆ. ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಅಮೆರಿಕದ ಜನಗಣತಿ ಬ್ಯೂರೊ ಪ್ರಕಾರ, 15.5 ಕೋಟಿ ಅಮೆರಿಕನ್ನರು ಮತದಾನ ಮಾಡಲು ಅರ್ಹರಾಗಿದ್ದಾರೆ. ನವೆಂಬರ್ 2ರವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್ (ಮೇಲ್–ಇನ್ ವೋಟಿಂಗ್) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲಾರಿಡಾ ವಿ.ವಿ ನೀಡಿರುವ ಅಂಕಿ ಅಂಶಗಳು ಹೇಳಿವೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳಲ್ಲಿ ಟ್ರಂಪ್ ಕೊಂಚ ಮುನ್ನಡೆ ಅನುಭವಿಸಿದ್ದರೆ, ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ಕಮಲಾ ಮುಂದಿದ್ದಾರೆ.
‘ನಿರ್ಣಾಯಕ ರಾಜ್ಯ’ಗಳು ಎಂದು ಕರೆಯಲಾಗುತ್ತಿರುವ ಏಳು ರಾಜ್ಯಗಳು (ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್‌ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾ) ಈ ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದು, ಇಬ್ಬರೂ ಅಭ್ಯರ್ಥಿಗಳು ಈ ರಾಜ್ಯಗಳಲ್ಲಿ ಮತಯಾಚನೆ ಮಾಡುವುದರ ಮೂಲಕ ಕೊನೆ ಹಂತದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್/ಸಿಯಾನ ನಡೆಸಿರುವ ಅಂತಿಮ ಸಮೀಕ್ಷೆಯಲ್ಲಿ ಈ ರಾಜ್ಯಗಳ ಪೈಕಿ, ಅರಿಜೋನಾ ಬಿಟ್ಟು ಉಳಿದೆಡೆ ಕಮಲಾ ಹ್ಯಾರಿಸ್ ಅವರು ಅಲ್ಪ ಅಂತರದಿಂದ ಟ್ರಂಪ್ ಅವರಿಗಿಂತ ಮುಂದಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ 46 ಮಂದಿ ಕಮಲಾ ಹ್ಯಾರಿಸ್ ಪರ ಒಲವು ತೋರಿದ್ದರೆ, ಶೇ 43ರಷ್ಟು ಮಂದಿ ಟ್ರಂಪ್ ಅಧ್ಯಕ್ಷರಾಗುವುದನ್ನು ಬಯಸಿದ್ದಾರೆ.
ಟ್ರಂಪ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದು ಇದು ಮೂರನೇ ಬಾರಿ. 2016ರಲ್ಲಿ ಗೆದ್ದಿದ್ದರೆ, 2020ರಲ್ಲಿ ಜೋ ಬೈಡನ್ ವಿರುದ್ಧ ಸೋತಿದ್ದರು. ಈ ಬಾರಿ ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದು ಪ್ರಕರಣದಲ್ಲಿ ದೋಷಿ ಎಂಬುದೂ ಸಾಬೀತಾಗಿದೆ. ಪ್ರಚಾರದ ಸಂದರ್ಭದಲ್ಲಿ ಎರಡು ಬಾರಿ ಅವರ ಹತ್ಯೆ ಯತ್ನ ನಡೆದಿದೆ.
ಅವರಿಗೆ ರಿಪಬ್ಲಿಕನ್ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಹಿಂದಿನ ಎರಡು ಚುನಾವಣೆಗಳಲ್ಲೂ ಟ್ರಂಪ್ ಅವರಿಗೆ ಶೇ 50ಕ್ಕಿಂತ ಹೆಚ್ಚು ಮತಗಳು ಬಂದಿರಲಿಲ್ಲ. ಹಾಗಾಗಿ, ಈ ಬಾರಿಯೂ ಅವರು ಅಷ್ಟು ಮತ ಗಳಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಇತ್ತ ಕಮಲಾ ಹ್ಯಾರಿಸ್ ಅವರು ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯೂ ಡೆಮಾಕ್ರಟಿಕ್ ಪಕ್ಷದಿಂದ ಜೋ ಬೈಡನ್ ಅವರೇ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೆ, ಪ್ರಚಾರದ ಸಂದರ್ಭದಲ್ಲಿ ಅವರು ಕಣದಿಂದ ಹಿಂದೆ ಸರಿದಿದ್ದರಿಂದ ಕಮಲಾ ಹ್ಯಾರಿಸ್ ಅಭ್ಯರ್ಥಿಯಾದರು.
ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾಗಿದ್ದರಿಂದ ಟ್ರಂಪ್ ಗೆಲುವು ಸುಲಭ ಎಂದು ಹೇಳಲಾಗಿತ್ತು. ಆದರೆ, ಮತದಾನ ಹತ್ತಿರ ಬರುತ್ತಿದ್ದಂತೆಯೇ ದೇಶದಾದ್ಯಂತ ಕಮಲಾ ಪರವಾಗಿ ಒಲವು ವ್ಯಕ್ತವಾಗುತ್ತಿದ್ದು, ಟ್ರಂಪ್ ಅವರಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಮಲಾ ಗೆದ್ದರೆ, ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಮತ್ತು ಮೊದಲ ವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.