ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ‘ಐವಿಎಫ್‌ನ ಪಿತಾಮಹ’ ಎಂದು ಬಣ್ಣಿಸಿಕೊಂಡಿದ್ದಾರೆ.
ಇಲ್ಲಿನ ಟೌನ್‌ಹಾಲ್‌ನಲ್ಲಿ ಮಹಿಳಾ ಮತದಾರರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಸಂತಾನೋತ್ಪತ್ತಿ ಕುರಿತ ವಿಷಯದಲ್ಲಿ ಜನರ ಪರವಾಗಿರುವ ಬಗ್ಗೆ ನಿರ್ಣಾಯಕ ಮತದಾರರ ಗುಂಪಿಗೆ ಮನವರಿಕೆ ಮಾಡುವ ಪ್ರಯತ್ನವಾಗಿ ಈ ರೀತಿ ಹೇಳಿದ್ದಾರೆ.
ನವೆಂಬರ್ 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಜನಪ್ರಿಯತೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಹಿಂದೆ ಇರುವ ಟ್ರಂಪ್, ಜಾರ್ಜಿಯಾದಲ್ಲಿ ‘ಫಾಕ್ಸ್ ನ್ಯೂಸ್’ ಆಯೋಜಿಸಿರುವ ಮಹಿಳೆಯರ ಕಾರ್ಯಕ್ರಮದಲ್ಲಿ ಈ ವಿಷಯ ಕುರಿತು ಚರ್ಚಿಸಲು ಉತ್ಸುಕನಾಗಿರುವೆ ಎಂದು ಹೇಳಿದ್ದಾರೆ.
‘ನಾನು ಐವಿಎಫ್ ಬಗ್ಗೆ ಮಾತನಾಡಲು ಬಯಸುತ್ತೇನೆ. ಆದರೆ, ಡೆಮಾಕ್ರಟಿಕ್ ಪಕ್ಷದವರು ನಮ್ಮ ವಿರುದ್ಧ ದಾಳಿಗೆ ಪ್ರಯತ್ನಿಸಿದರು. ನಾವು ಅವರಿಗಿಂತಲೂ ಹೆಚ್ಚಾಗಿ ಐವಿಎಫ್‌ನ ಪರವಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಐವಿಎಫ್ ಮೇಲಿನ ಸಂಭವನೀಯ ನಿರ್ಬಂಧಗಳ ಬಗ್ಗೆ ಕೆಲವು ಮಹಿಳೆಯರು ಕಳವಳ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಗಮನಿಸಿದ ಟ್ರಂಪ್, ಉಚಿತವಾಗಿ ಐವಿಎಫ್ ಕಲ್ಪಿಸುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
‘ಟ್ರಂಪ್ ಅವರು ಐವಿಎಫ್ ಚಿಕಿತ್ಸೆಗಳಿಗೆ ವ್ಯಾಪಕ ಬೆಂಬಲ ನೀಡುತ್ತಿದ್ದು, ಐವಿಎಫ್ ಕುರಿತ ಪ್ರಶ್ನೆಗೆ ಉತ್ಸಾಹದಿಂದ ಉತ್ತರಿಸುವಾಗ ತಮಾಷೆಗೆ ಈ ರೀತಿ ಹೇಳಿದ್ದಾರೆ’ ಎಂದು ವಕ್ತಾರ ಕರೋಲಿನ್ ಲೀವಿಟ್ ತಿಳಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಮಲಾ ಹ್ಯಾರಿಸ್, ‘ವಾಸ್ತವವಾಗಿ ಈ ವಿಷಯದಲ್ಲಿ ಅವರು ಕೈಗೊಂಡ ಕ್ರಮಗಳು ಅಮೆರಿಕದ ಮಹಿಳೆಯರು ಮತ್ತು ಕುಟುಂಬಗಳಿಗೆ ತುಂಬಾ ಹಾನಿಕಾರಕವಾಗಿವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.