ವಾಷಿಂಗ್ಟನ್: 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಪರ್ಧೆಯ ಆಕಾಂಕ್ಷಿಗಳ ಬುಧವಾರ ಎರಡನೇ ಸಂವಾದ ನಡೆಯಲಿದೆ.
ಇದರಲ್ಲಿ ಭಾರತ ಮೂಲದ ಇಬ್ಬರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ದಕ್ಷಿಣ ಕರೊಲಿನದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಹಾಗೂ ಉದ್ಯಮಿ ವಿವೇಕ್ ರಾಮಸ್ವಾಮಿಯವರು ಕ್ಯಾಲಿಫೋರ್ನಿಯಾದ ಸಿಮಿ ವ್ಯಾಲಿಯಲ್ಲಿ ನಡೆಯಲಿರುವ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿಗಳ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ರಿಪಬ್ಲಿಕನ್ ಪಕ್ಷದ ಆಕಾಂಕ್ಷಿಗಳ ಪೈಕಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುನ್ನಡೆಯಲ್ಲಿದ್ದು, ಅವರು ಈ ಸಂವಾದದಲ್ಲಿ ಭಾಗವಹಿಸುತ್ತಿಲ್ಲ. ರಿಪಬ್ಲಿಕನ್ ಪಕ್ಷದ ಆರು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಿಮಿ ವ್ಯಾಲಿಯ ರೊನಾಲ್ಡ್ ರೀಗನ್ ಪ್ರೆಸಿಡೆನ್ಸಿಯಲ್ ಫೌಂಡೇಶನ್ ಆ್ಯಂಡ್ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ಈ ಸಂವಾದ ನಡೆಯಲಿದೆ.
ನಿಕ್ಕಿ ಹ್ಯಾಲಿ, ರಾಮಸ್ವಾಮಿ, ಫ್ಲೊರಿಡಾ ರಾಜ್ಯಪಾಲ ರಾನ್ ಡೆಸಂಟಿಸ್, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್, ನ್ಯೂಜೆರ್ಸಿ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿ ಹಾಗೂ ಸೆನೇಟರ್ ಟಿಮ್ ಸ್ಕಾಟ್ ಈ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ತಿಂಗಳು ನಡೆದ ಸಂವಾದದಲ್ಲಿ ಭಾಗಿಯಾಗಲು 8 ಮಂದಿ ಅರ್ಹತೆ ಪಡೆದುಕೊಂಡಿದ್ದರು.
ಮೊದಲ ಸಂವಾದದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹ್ಯಾಲಿ ಹಾಗೂ ರಾಮಸ್ವಾಮಿಯವರ ಜನಪ್ರಿಯತೆ ಹೆಚ್ಚಳವಾಗಿದ್ದು, ಟ್ರಂಪ್ ಬಳಿಕದ ಸ್ಥಾನದಲ್ಲಿ ಇವರಿಬ್ಬರಿದ್ದಾರೆ.
ಟ್ರಂಪ್ ಅವರಿಗೆ ಪರ್ಯಾಯ ಎಂದೇ ಬಿಂಬಿತವಾಗಿರುವ ಡೆಸಂಟಿಸ್ ಅವರು ಬುಧವಾರದ ಸಂವಾದದಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ. ಹ್ಯಾಲೆ ಹಾಗೂ ರಾಮಸ್ವಾಮಿಯವರು ಈಗಾಗಲೇ ತಮ್ಮ ಆರ್ಥಿಕ ಹಾಗೂ ಶಕ್ತಿ ನೀತಿಗಳನ್ನು ಬಿಡುಗಡೆಗೊಳಿಸಿದ್ದು, ಅವರ ಸಂವಾದದಲ್ಲಿ ಇದೇ ಪ್ರಾಥಮಿಕ ವಿಷಯವಾಗಿರಲಿದೆ.
ಹ್ಯಾಲಿ ಅವರು ಈಗಾಗಲೇ ಬೈಡನ್ ಅವರನ್ನು ಹಿಂದೆ ಸರಿಸಿದ್ದು, ಮುಂದಿನ ರಿಪಬ್ಲಿಕನ್ ಸಂವಾದದಲ್ಲಿ ಅವರು ಗೆಲ್ಲಬೇಕಿದೆ ಎಂದು ಯುಎಸ್ ಟುಡೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.