ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನ ದಾಳಿಗೆ ಸಂಚು: ಅಫ್ಗಾನ್ ಮೂಲದ ವ್ಯಕ್ತಿ ಬಂಧನ

ಏಜೆನ್ಸೀಸ್
Published 9 ಅಕ್ಟೋಬರ್ 2024, 6:37 IST
Last Updated 9 ಅಕ್ಟೋಬರ್ 2024, 6:37 IST
<div class="paragraphs"><p>ಕಮಲಾ ಹ್ಯಾರಿಸ್‌ ಮತ್ತು ಡೊನಾಲ್ಡ್‌ ಟ್ರಂಪ್‌ </p></div>

ಕಮಲಾ ಹ್ಯಾರಿಸ್‌ ಮತ್ತು ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್ ಚಿತ್ರಗಳು

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನದಂದು ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಅಫ್ಗಾನಿಸ್ತಾನ ಮೂಲದ ವ್ಯಕ್ತಿಯನ್ನು ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಒಕ್ಲಾಹೊಮ ನಗರದಲ್ಲಿ ಸೋಮವಾರ ಬಂಧಿಸಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯಿಂದ ಪ್ರೇರಣೆಗೊಂಡಿರುವ ಆರೋಪಿಯು ಭಾರಿ ಸಾವು–ನೋವು ಉಂಟು ಮಾಡುವ ಉದ್ದೇಶ ಹೊಂದಿದ್ದ ಎಂದು ಕ್ರಿಮಿನಲ್‌ ದೂರು ದಾಖಲಿಸಿಕೊಳ್ಳಲಾಗಿದೆ.

ADVERTISEMENT

'ಬಂಧಿತನನ್ನು ನಾಸಿರ್ ಅಹ್ಮದ್‌ ತೌಹೇದಿ (27) ಎಂದು ಗುರುತಿಸಲಾಗಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಈತ, ಕಾಬುಲ್‌ನಲ್ಲಿ ತನ್ನ ಸಂಬಂಧಿಕರ ಪುನರ್ವಸತಿಗಾಗಿ ಹಣ ಹೊಂದಿಸಲು ದಾಳಿಗೆ ಸಂಚು ರೂಪಿಸಿದ್ದ. ಅದಕ್ಕಾಗಿ ತನ್ನ ಸೋದರಳಿಯನನ್ನೂ (18 ವರ್ಷಕ್ಕಿಂತ ಚಿಕ್ಕವನಾದ ಕಾರಣ ಆತನ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ) ಸೇರಿಸಿಕೊಂಡಿದ್ದ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

'ತೌಹೇದಿ AK 47 ರೈಫಲ್‌ಗಳನ್ನು ಬಳಸುವ ಉದ್ದೇಶ ಹೊಂದಿದ್ದನಾದರೂ, ಯಾವ ಸ್ಥಳದಲ್ಲಿ ದಾಳಿ ನಡೆಸಲು ಯೋಜಿಸಿದ್ದ ಎಂಬುದು ಸ್ಪಷ್ಟವಾಗಿಲ್ಲ. ವಾಷಿಂಗ್ಟನ್‌ ನಗರದಲ್ಲಿ ಅಳವಡಿಸಿರುವ ಕ್ಯಾಮರಾಗಳ ಆಕ್ಸೆಸ್‌ ಪಡೆಯುವುದು ಹೇಗೆ ಎಂಬ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಡಿದ್ದ. ಶ್ವೇತಭವನ ಮತ್ತು ವಾಷಿಂಗ್ಟನ್‌ ಸ್ಮಾರಕಗಳ ವೆಬ್‌ಕ್ಯಾಮ್‌ ಬಗ್ಗೆಯೂ ಶೋಧಿಸಿರುವುದು ಆತನ ಆನ್‌ಲೈನ್‌ ಸರ್ಚ್‌ ಹಿಸ್ಟರಿಯಿಂದ ತಿಳಿದುಬಂದಿದೆ. ನಂತರ, ಇಸ್ಲಾಮಿಕ್ ಸ್ಟೇಟ್‌ ಸಂಘಟನೆ ಸದಸ್ಯ ಎನ್ನಲಾದ ವ್ಯಕ್ತಿಗೆ ಯೋಜನೆ ಕುರಿತು ಮಾಹಿತಿ ನೀಡಿದ್ದ. ಆತನ ಯಾವುದೇ ಆದೇಶ ಪಾಲಿಸುವುದಾಗಿ ಹೇಳಿದ್ದ' ಎಂಬುದೂ ದೂರಿನಲ್ಲಿದೆ.

'ದೇವರ ಇಚ್ಛೆ ಹಾಗೂ ಸಹಕಾರದೊಂದಿಗೆ ಚುನಾವಣೆ ದಿನಕ್ಕೆ ಸಜ್ಜಾಗುತ್ತೇವೆ' ಎಂಬ ಸಂದೇಶ ಕಳುಹಿಸಿದ್ದ ಎಂದೂ ತಿಳಿಸಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಇದೇ ವರ್ಷ ನವೆಂಬರ್‌ 5ರಂದು ನಡೆಯಲಿದೆ.

ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಮತ್ತು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಚುನಾವಣಾ ಪ್ರಚಾರದ ವೇಳೆಯೇ ಟ್ರಂಪ್‌ ಅವರನ್ನು ಹತ್ಯೆಗೈಯ್ಯ‌ಲು ಎರಡು ಬಾರಿ ಪ್ರಯತ್ನ ನಡೆದಿವೆ.

ಏತನ್ಮಧ್ಯೆ ಅಧ್ಯಕ್ಷ ಜೋ ಬೈಡನ್ ಅವರು, ಕಳೆದ ಚುನಾವಣೆ ಸೋಲನ್ನು ಟ್ರಂಪ್‌ ಈಗಲೂ ಒಪ್ಪಿಕೊಳ್ಳುವುದಿಲ್ಲ. ಈ ಬಾರಿಯ ಚುನಾವಣೆಯು ಶಾಂತಿಯುತವಾಗಿ ನಡೆಯುವುದು ಅನುಮಾನ ಎಂದು ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.