ವಾಷಿಂಗ್ಟನ್: ಎಚ್–1ಬಿ ವೀಸಾ ಕೋರಿ, 2024ನೇ ಹಣಕಾಸು ವರ್ಷಕ್ಕೆ ನಿಗದಿ ಮಾಡಿರುವ ಮಿತಿಯ ಸಂಖ್ಯೆಯಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ ಸಂಸ್ಥೆ (ಯುಎಸ್‌ಸಿಐಎಸ್) ಹೇಳಿದೆ.
ವೀಸಾ ವಿತರಣೆಗಾಗಿ ಆಯ್ಕೆಗೊಳ್ಳದ ಅರ್ಜಿದಾರರಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಯುಎಸ್‌ಸಿಐಎಸ್ ತಿಳಿಸಿದೆ.
ಅಮೆರಿಕದಲ್ಲಿ ಉದ್ಯೋಗ ಪಡೆದವರಿಗೆ ಎಚ್–1ಬಿ ವೀಸಾ ನೀಡಲಾಗುತ್ತದೆ. ಹೆಚ್ಚು ಕೌಶಲ ಹೊಂದಿದ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಅಮೆರಿಕದ ಕಂಪನಿಗಳಿಗೆ ಅವಕಾಶ ಇದ್ದು, ಭಾರತ ಮತ್ತು ಚೀನಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಳ್ಳುತ್ತಾರೆ.
ಸರ್ಕಾರ ಹೇರಿರುವ ಮಿತಿ ಪ್ರಕಾರ, ವರ್ಷಕ್ಕೆ 65 ಸಾವಿರ ಎಚ್–1ಬಿ ವೀಸಾ ವಿತರಣೆಗೆ ಅವಕಾಶ ಇದೆ. ‘ವಿಶೇಷ ಮಿತಿ’ಯಡಿ 20 ಸಾವಿರ ವೀಸಾಗಳನ್ನು ವಿತರಿಸಲಾಗುತ್ತದೆ. ಈ ಎರಡೂ ವಿಧದ ವೀಸಾಗಳ ವಿತರಣೆಗೆ ನಿಗದಿ ಮಾಡಿರುವ ಮಿತಿಗೆ ತಕ್ಕಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಯುಎಸ್‌ಸಿಐಎಸ್ ಹೇಳಿದೆ.
ಅಮೆರಿಕದ ಹಣಕಾಸು ವರ್ಷದ ಅವಧಿ ಅಕ್ಟೋಬರ್ 1ರಿಂದ ಸೆಪ್ಟೆಂಬರ್ 30 ರವರೆಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.