ವಾಷಿಂಗ್ಟನ್: ಮೆಕ್‌ಮೋಹನ್ ರೇಖೆಯನ್ನು ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯಾಗಿ ಅಮೆರಿಕ ಗುರುತಿಸಿದೆ ಎಂದು ಅಮೆರಿಕದ ಸೆನೆಟ್ ನಿರ್ಣಯ ಕೈಗೊಂಡಿದೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿರುವ ಸಂದರ್ಭದಲ್ಲೇ, ನಮ್ಮ ಕಾರ್ಯತಂತ್ರದ ಪಾಲುದಾರರಾದ ಭಾರತದೊಂದಿಗೆ ಅಮೆರಿಕ ಹೆಗಲು ಕೊಟ್ಟು ನಿಲ್ಲುವುದು ಅಗತ್ಯವಾಗಿದೆ ಎಂದು ಸೆನೆಟರ್ ಜೆಫ್ ಮೆರ್ಕ್ಲಿ ಅವರೊಂದಿಗೆ ನಿರ್ಣಯ ಮಂಡಿಸಿದ ಸೆನೆಟರ್ ಬಿಲ್ ಹ್ಯಾಗರ್ಟಿ ಹೇಳಿದರು.
‘ಈ ನಿರ್ಣಯದಿಂದಾಗಿ ಅರುಣಾಚಲ ಪ್ರದೇಶ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವೆಂದು ಅಮೆರಿಕ ಗುರುತಿಸಿದಂತಾಗಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸಲು ಹೊರಟಿರುವ ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸಿದಂತಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಕ್ವಾಡ್ ದೇಶಗಳ ನಡುವಣ ಬಾಂಧವ್ಯ ವೃದ್ಧಿಗೂ ಈ ನಿರ್ಣಯದಿಂದ ಉತ್ತೇಜನ ಸಿಕ್ಕಿದಂತಾಗಿದೆ’ ಎಂದು ಅವರು ಹೇಳಿದರು.
ಕಳೆದ ಆರು ವರ್ಷಗಳಿಂದಲೂ ಗಡಿ ವಿಚಾರದಲ್ಲಿ ಚೀನಾ ತಕರಾರು ತೆಗೆಯುತ್ತ, ಸಂಘರ್ಷಕ್ಕೆ ಉತ್ತೇಜನ ನೀಡುತ್ತಿದೆ. ಹೀಗಾಗಿ ಇದಕ್ಕೆ ಕೊನೆ ಹಾಡಬೇಕೆಂಬ ಕಾರಣಕ್ಕೆ ಮೆಕ್‌ಮೋಹನ್ ರೇಖೆಯೇ ಚೀನಾ–ಅರುಣಾಚಲ ಪ್ರದೇಶ ನಡುವಿನ ಅಂತರರಾಷ್ಟ್ರೀಯ ಗಡಿ ಎಂಬುದಾಗಿ ಅಮೆರಿಕ ಪರಿಗಣಿಸುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.