ADVERTISEMENT

ಭಾರತದಿಂದ ಕದ್ದು ಸಾಗಿಸಿದ್ದ 307 ಪುರಾತನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ

ಪಿಟಿಐ
Published 19 ಅಕ್ಟೋಬರ್ 2022, 6:58 IST
Last Updated 19 ಅಕ್ಟೋಬರ್ 2022, 6:58 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನ್ಯೂಯಾರ್ಕ್: ಭಾರತದಿಂದ ಕಳವು ಮತ್ತು ಕಳ್ಳಸಾಗಣೆ ಮಾಡಿದ ಸುಮಾರು ನಾಲ್ಕು ಮಿಲಿಯನ್ ಡಾಲರ್ ಮೌಲ್ಯದ(ಸುಮಾರು ₹33 ಕೋಟಿ) 307 ಪುರಾತನ ವಸ್ತುಗಳನ್ನು ಅಮೆರಿಕ ಹಿಂದಿರುಗಿಸಿದೆ.

15 ವರ್ಷಗಳ ತನಿಖೆಯಲ್ಲಿ ಈ ವಸ್ತುಗಳನ್ನು ಪತ್ತೆಮಾಡಲಾಗಿದೆ. ಇದರಲ್ಲಿ ಬಹುತೇಕವುಗಳನ್ನು ಕಲಾಕೃತಿಗಳ ವ್ಯಾಪಾರಿ ಸುಭಾಷ್ ಕಪೂರ್ ಅವರಿಂದ ವಶಪಡಿಸಿಕೊಳ್ಳಲಾಗಿದೆ.

ಮ್ಯಾನ್‌ಹಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರು ಸುಮಾರು 4 ಮಿಲಿಯನ್ ಡಾಲರ್ ಮೌಲ್ಯದ 307 ಪ್ರಾಚೀನ ವಸ್ತುಗಳನ್ನು ಭಾರತದ ಜನರಿಗೆ ಹಿಂದಿರುಗಿಸಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ADVERTISEMENT

ಇವುಗಳಲ್ಲಿ 235 ಪುರಾತನ ವಸ್ತುಗಳನ್ನು ಸುಭಾಷ್ ಕಪೂರ್ ಅವರ ಕಚೇರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈತ ಅಫ್ಗಾನಿಸ್ತಾನ, ಕಾಂಬೋಡಿಯಾ, ಭಾರತ, ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್ ಮುಂತಾದ ದೇಶಗಳಿಂದ ಪುರಾತನ ವಸ್ತುಗಳ ಕಳ್ಳ ಸಾಗಣೆಗೆ ನೆರವು ನೀಡಿದ ಕುಖ್ಯಾತ ಲೂಟಿಕೋರ ಎಂದು ಅವರು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ರಣದೀರ್ ಜೈಸ್ವಾಲ್ ಮತ್ತು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿಯ ತನಿಖಾಧಿಕಾರಿ ಚಾರ್ಜ್ ಕ್ರಿಸ್ಟೋಫರ್ ಲಾವ್ ಹಾಜರಿದ್ದ ಪುರಾತನ ವಸ್ತುಗಳ ವಾಪಸಾತಿ ಸಮಾರಂಭದಲ್ಲಿ ಎಲ್ಲಾ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲಾಗಿದೆ ಎಂದು ಮ್ಯಾನ್‌ಹಟನ್ ಜಿಲ್ಲಾ ಅಟಾರ್ನಿ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.

‘ಈ ಪುರಾತನ ವಸ್ತುಗಳನ್ನು ಭಾರತದ ಹಲವು ಕಡೆಗಳಿಂದ ಕಳವು ಮಾಡಿ ಅತ್ಯಾಧುನಿಕ ಕಳ್ಳಸಾಗಣೆ ಜಾಲಗಳಿಂದ ಸಾಗಣೆ ಮಾಡಲಾಗಿದೆ. ಈ ಸಾಂಸ್ಕೃತಿಕ ಅಥವಾ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ನೂರಾರು ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ಎಂದು ಬ್ರಾಗ್ ಹೇಳಿದರು,

ಹಿಂದಿರುಗಿಸಲಾದ ವಸ್ತುಗಳಲ್ಲಿ ಮಾರ್ಬಲ್‌ನಿಂದ ತಯಾರಿಸಿದ 12-13ನೇ ಶತಮಾನಕ್ಕೆ ಸೇರಿದ ಕಮಾನು ಸೇರಿದೆ. ಇದರ ಬೆಲೆ ಸರಿ ಸುಮಾರು 85,000 ಡಾಲರ್ ಎಂದು ಅಂದಾಜಿಸಲಾಗಿದ್ದು, ಕಪೂರ್‌ ಅವರಿಂದಲೇ ಇದನ್ನೂ ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.