ADVERTISEMENT

ಚೀನಾ ಬೆದರಿಕೆ ಎದುರಿಸಲು ಸೇನೆ ಮರುನಿಯೋಜನೆ: ಅಮೆರಿಕ

ಪಿಟಿಐ
Published 26 ಜೂನ್ 2020, 6:48 IST
Last Updated 26 ಜೂನ್ 2020, 6:48 IST
ಅಮೆರಿಕದ ಸೇನಾ ವಾಹನಗಳು  –ಪ್ರಾತಿನಿಧಿಕ ಚಿತ್ರ
ಅಮೆರಿಕದ ಸೇನಾ ವಾಹನಗಳು  –ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ‘ಭಾರತ, ಮಲೇಷ್ಯಾ, ಇಂಡೊನೇಷ್ಯಾ, ಫಿಲಿಪ್ಪೀನ್ಸ್‌ನಂತಹ ಏಷ್ಯಾದ ದೇಶಗಳಿಗೆ, ಚೀನಾದ ಸೇನೆ ಬೆದರಿಕೆ ಒಡ್ಡುತ್ತಿದೆ. ಚೀನಾದ ಅಪಾಯವನ್ನು ಎದುರಿಸಲು ಸಾಧ್ಯವಾಗುವ ರೀತಿಯಲ್ಲಿ ಅಮೆರಿಕವು ತನ್ನ ಜಾಗತಿಕ ಪಡೆಗಳ ನಿಯೋಜನೆಯನ್ನು ಮರು ಪರಿಶೀಲಿಸುತ್ತಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

‘ಯಾವುದೇ ಸಂದರ್ಭದಲ್ಲೂ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯನ್ನು (ಪಿಎಲ್‌ಎ) ಎದುರಿಸಲು ಸನ್ನದ್ಧರಾಗಿದ್ದೇವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಕಾಲದ ಸವಾಲುಗಳ ಬಗ್ಗೆ ಚಿಂತಿಸಿ, ಅವುಗಳನ್ನು ಎದುರಿಸಲು ಸಾಕಷ್ಟು ಸಂಪನ್ಮೂಲಗಳು ಇವೆ ಎಂಬುದನ್ನೂ ಖಚಿತಪಡಿಸುತ್ತೇವೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸೂಚನೆಯ ಮೇರೆಗೆ ಸೇನಾ ಮರುನಿಯೋಜನೆಯ ಪರಿಶೀಲನೆ ನಡೆಸಲಾಗುತ್ತಿದೆ. ಅದರ ಭಾಗವಾಗಿಯೇ ಜರ್ಮನಿಯಲ್ಲಿರುವ ನಮ್ಮ ಸೈನಿಕರ ಸಂಖ್ಯೆಯನ್ನು 52 ಸಾವಿರದಿಂದ 25 ಸಾವಿರಕ್ಕೆ ಇಳಿಸಲು ನಿರ್ಧರಿಸಲಾಗಿದೆ. ವಾಸ್ತವ ಸ್ಥಿತಿಗೆ ಅನುಗುಣವಾಗಿ ಸೇನೆಯ ನಿಯೋಜನೆ ನಡೆಯಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

‘ಭಾರತ, ವಿಯೆಟ್ನಾಂ, ಮಲೇಷ್ಯಾ, ಇಂಡೊನೇಷ್ಯಾ ದೇಶಗಳು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಸೇನೆಯು ಅಪಾಯವನ್ನು ತಂದೊಡ್ಡಿದೆ. ಅಮೆರಿಕವು ಮುಂದೆ ಕೈಗೊಳ್ಳುವ ಕ್ರಮಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಹೊಸ ಸವಾಲುಗಳು ಎದುರಾಗಬಹುದು. ಅಂಥ ರಾಷ್ಟ್ರಗಳು ತಮ್ಮ ರಕ್ಷಣೆಗೆ ಬೇಕಾದ ಸಿದ್ಧತೆಗಳನ್ನು ಹಿಂದೆಂದೂ ಮಾಡಿರದ ರೀತಿಯಲ್ಲಿ ಮಾಡಿಕೊಳ್ಳಬೇಕಾಗಬಹುದು. ಆದ್ದರಿಂದ ನಮ್ಮ ಎಲ್ಲಾ ಮಿತ್ರರಾಷ್ಟ್ರಗಳ, ವಿಶೇಷವಾಗಿ ಐರೋಪ್ಯ ರಾಷ್ಟ್ರಗಳ ಒಪ್ಪಿಗೆ ಪಡೆದೇ ಮುಂದಿನ ಹೆಜ್ಜೆಗಳನ್ನು ಇಡಲು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

‘ಸೇನೆಯ ಮರುನಿಯೋಜನೆಯ ಬಗ್ಗೆ ಟ್ರಂಪ್‌ ಈಗಾಗಲೇ ಮಾತುಕತೆ ಆಂಭಿಸಿದ್ದಾರೆ. ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಅವರು ಎರಡು ದಿನಗಳಲ್ಲಿ ಲಂಡನ್‌ ಹಾಗೂ ಬ್ರುಸೆಲ್ಸ್‌ಗೆ ಭೇಟಿ ನೀಡಲಿದ್ದಾರೆ. ನಮ್ಮ ಯೋಜನೆಗಳೇನು, ಚಿಂತನೆಗಳೇನು, ಅದನ್ನು ಹೇಗೆ ಕಾರ್ಯಗತಗೊಳಿಸುತ್ತೇವೆ ಎಂಬುದನ್ನು ನಾವು ವಿವರಿಸಲಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜರ್ಮನಿಯಲ್ಲಿ ತನ್ನ ಸೇನಾ ಬಲವನ್ನು ಕಡಿಮೆ ಮಾಡುವ ಟ್ರಂಪ್‌ ಅವರ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಐರೋಪ್ಯ ರಾಷ್ಟ್ರಗಳ ಮೇಲೆ ರಷ್ಯಾದ ಅಪಾಯ ಹೆಚ್ಚಲಿದೆ ಎಂದು ವಿಶ್ಲೆಷಿಸಲಾಗಿದೆ. ಆದರೆ ಈ ವಾದವನ್ನು ಪಾಂಪಿಯೊ ತಳ್ಳಿಹಾಕಿದ್ದಾರೆ.

ಭಾರತ–ಚೀನಾ ಗಡಿಯಲ್ಲಿ ಮತ್ತು ಆಯಕಟ್ಟಿನ ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಬಲವನ್ನು ಹೆಚ್ಚಿಸಿರುವ ಚೀನಾದ ಕ್ರಮವನ್ನು ಪಾಂಪಿಯೊ ಕಳೆದ ವಾರ ಟೀಕಿಸಿದ್ದರು. ಅಲ್ಲದೆ, ಚೀನಾವನ್ನು ‘ರಕ್ಕಸ ರಾಷ್ಟ್ರ’ ಎಂದು ಬಣ್ಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.