ಹೊನಲುಲು/ಡಾನೆಸ್ಕ್ (ಉಕ್ರೇನ್): ಉಕ್ರೇನ್‌ನೊಂದಿಗಿನ ಸಂಘರ್ಷವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಲು ಈಗಲೂ ಅವಕಾಶ ಇದೆ. ಈ ಬಗ್ಗೆ ರಷ್ಯಾ ಯೋಚಿಸಬೇಕು ಎಂದು ಅಮೆರಿಕ ಹೇಳಿದೆ.
‘ಉಕ್ರೇನ್ ಮೇಲೆ ರಷ್ಯಾ ನಡೆಸುವ ದಾಳಿ ವ್ಯಾಪಕ ಹಿಂಸೆ–ತೊಂದರೆಗೆ ಕಾರಣವಾಗುತ್ತದೆ. ಜಾಗತಿಕವಾಗಿ ನೀವು ಪ್ರತ್ಯೇಕತೆ ಎದುರಿಸಬೇಕಾಗುತ್ತದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ಸಂಘರ್ಷ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್, ‘ಉಕ್ರೇನ್ ಮೇಲೆ ರಷ್ಯಾ ದಾಳಿ ನಡಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ನಮ್ಮ ರಾಯಭಾರ ಕಚೇರಿ ಸಿಬ್ಬಂದಿಯನ್ನು ಕೀವ್‌ನಿಂದ ವಾಪಸು ಕರೆಸಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದ್ದಾರೆ.
ಅಮೆರಿಕದ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪುಟಿನ್, ‘ಇಂಥ ಹೇಳಿಕೆಗಳು ಮಾನಸಿಕ ಅಸಮತೋಲನವನ್ನು ತೋರಿಸುತ್ತವೆ’ ಎಂದಿದ್ದಾರೆ.
ಉಕ್ರೇನ್ ಮೇಲೆ ದಾಳಿ ನಡೆಸುವ ಯೋಜನೆ ಇಲ್ಲ ಎಂದು ರಷ್ಯಾ ಪದೇಪದೇ ಹೇಳುತ್ತಿದೆ. ತನ್ನದೇನಿದ್ದರೂ ನ್ಯಾಟೊ ಮಿತ್ರ ರಾಷ್ಟ್ರಗಳ ಆಕ್ರಮಣಶೀಲತೆಗೆ ಪ್ರತಿಕ್ರಿಯೆ ಅಷ್ಟೆ ಎಂದಿದೆ.
ವಾಪಸ್: ಯುರೋಪ್‌ನಲ್ಲಿ ಭದ್ರತೆ ಹಾಗೂ ಸಹಕಾರ ಸಂಘಟನೆಯಲ್ಲಿ (ಒಎಸ್‌ಸಿಇ) ಕಾರ್ಯ ನಿರ್ವಹಿಸುತ್ತಿರುವ ಅಮೆರಿಕ ಸಿಬ್ಬಂದಿ, ಬಂಡುಕೋರರ ಹಿಡಿತದಲ್ಲಿರುವ ಡಾನೆಸ್ಕ್ ನಗರವನ್ನು ಭಾನುವಾರ ತೊರೆದಿದ್ದಾರೆ.
ತನ್ನ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿದ್ದಾಗಿ ಆಸ್ಟ್ರೇಲಿಯಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.