ADVERTISEMENT

ಅಮೆರಿಕ: ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ನಿರ್ದೇಶಕರಾಗಿ ಸೇತುರಾಮನ್‌ ನೇಮಕ

ಪಿಟಿಐ
Published 20 ಜೂನ್ 2020, 9:36 IST
Last Updated 20 ಜೂನ್ 2020, 9:36 IST
ವಿಜ್ಞಾನಿ ಡಾ.ಸೇತುರಾಮನ್‌ ಪಂಚನಾಥನ್‌
ವಿಜ್ಞಾನಿ ಡಾ.ಸೇತುರಾಮನ್‌ ಪಂಚನಾಥನ್‌   

ವಾಷಿಂಗ್ಟನ್‌: ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ನ (ಎನ್‌ಎಸ್‌ಎಫ್‌) ನಿರ್ದೇಶಕರನ್ನಾಗಿ ಭಾರತ ಮೂಲದ ಅಮೆರಿಕನ್‌ ವಿಜ್ಞಾನಿ ಡಾ.ಸೇತುರಾಮನ್‌ ಪಂಚನಾಥನ್‌ ಅವರ ನೇಮಕಕ್ಕೆ ಅಮೆರಿಕದ ಸೆನೆಟ್‌ ಅನುಮೋದನೆ ನೀಡಿದೆ.

ಅವರು ಜುಲೈ 6ರಂದು ಅಧಿಕಾರ ಸ್ವೀಕರಿಸುವರು. ವಿಜ್ಞಾನ ಮತ್ತು ಎಂಜಿನಿಯರಿಂಗ್‌ಗೆ ಸಂಬಂಧಿಸಿದಂತೆ ವೈದ್ಯಕೀಯೇತರ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆಗೆ ಎನ್‌ಎಸ್‌ಎಫ್‌ ಪ್ರೋತ್ಸಾಹ ನೀಡುತ್ತದೆ. ದೇಶದ ಪ್ರತಿಷ್ಠಿತ ಸಂಸ್ಥೆಯ ವಾರ್ಷಿಕ ಬಜೆಟ್‌ ₹ 56,426 ಕೋಟಿ (7.4 ಶತಕೋಟಿ ಡಾಲರ್‌).

58 ವರ್ಷದ ಸೇತುರಾಮನ್‌ ಅವರದು ವೈಜ್ಞಾನಿಕ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಎನ್ಎಸ್‌ಎಫ್‌ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡುವುದು ಸೆನೆಟ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯ. ಸದಸ್ಯರ ನಡುವೆ ಜಟಾಪಟಿಯೂ ಸಾಮಾನ್ಯ. ಆದರೆ, ಸೇತುರಾಮನ್‌ ಅವರ ನೇಮಕಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿರುವುದು ಅವರ ಪ್ರತಿಭೆ ಹಾಗೂ ಜನಪ್ರಿಯತೆಗೆ ಸಾಕ್ಷಿ ಎಂದೇ ಹೇಳಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.