ವಾಷಿಂಗ್ಟನ್: ರಷ್ಯಾ ಎಸ್–400 ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಿದ ವಿಷಯ ಕುರಿತು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚಿಸುವಂತೆ ಸೆನೆಟ್ ಸದಸ್ಯರೊಬ್ಬರು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಒತ್ತಾಯಿಸಿದ್ದಾರೆ.
ಸೆನೆಟ್‌ನ ವಿದೇಶಿ ಸಂಬಂಧಗಳ ಸಮಿತಿಯ ಚೇರಮನ್ ಆಗಿರುವ ಸಂಸದ ರಾಬರ್ಟ್ ಮೆನೆಂಡೇಜ್ ಈ ಸಂಬಂಧ ಆಸ್ಟಿನ್ ಅವರಿಗೆ ಪತ್ರ ಬರೆದಿದ್ದಾರೆ. ವಿದೇಶಾಂಗ ನೀತಿ ನಿರೂಪಣೆಯಲ್ಲಿ ಈ ಸಮಿತಿ ಪ್ರಮುಖ ಪಾತ್ರ ವಹಿಸುವುದರಿಂದ, ರಾಬರ್ಟ್ ಅವರ ಪತ್ರಕ್ಕೆ ಮಹತ್ವ ಬಂದಿದೆ.
‘21ನೇ ಶತಮಾನ ಒಡ್ಡಿರುವ ಸವಾಲುಗಳನ್ನು ಎದುರಿಸಲು ಅಮೆರಿಕ ಮತ್ತು ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಅಗತ್ಯ. ಅದೇ ರೀತಿ, ಪ್ರಜಾತಂತ್ರದ ಮೌಲ್ಯಗಳು, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುವುದು ಸಹ ಮುಖ್ಯ’ ಎಂದು ರಾಬರ್ಟ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಆಸ್ಟಿನ್ ಅವರು ಮಾರ್ಚ್ 19ರಿಂದ 21ರ ವರೆಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕೆ.ಡೋಭಾಲ್ ಅವರೊಂದಿಗೆ ಮಾತುಕತೆ ನಡೆಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.