ವಾಷಿಂಗ್ಟನ್: ದತ್ತಾಂಶ ಸೀಮಿತಗೊಳಿಸುವ ಅಥವಾ ಗಡಿ ನಿರ್ಬಂಧಿಸುವ ನೀತಿ ಕೈಬಿಡಬೇಕು ಎಂದು ಅಮೆರಿಕದ ಇಬ್ಬರು ಹಿರಿಯ ಸೆನೆಟರ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಇಂತಹ ನೀತಿಯಿಂದ ಅಮೆರಿಕದ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಯಾವುದೇ ಉಪಕರಣದಲ್ಲಿನ ದತ್ತಾಂಶವನ್ನು ಆಯಾ ದೇಶದ ಗಡಿಗೆ ಮಾತ್ರ ಸೀಮಿತಗೊಳಿಸುವುದು ಈ ನೀತಿಯಾಗಿದೆ.
ಎಲ್ಲ ಸೇವಾ ಸಂಸ್ಥೆಗಳು ಹಣ ಪಾವತಿಸುವ ವ್ಯವಸ್ಥೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಭಾರತದಲ್ಲಿನ ಕಂಪ್ಯೂಟರ್‌ಗಳು ಅಥವಾ ಉಪಕರಣಗಳಲ್ಲೇ ಸಂಗ್ರಹಿಸಿಡಬೇಕು. ಅಕ್ಟೋಬರ್ 15ರ ಒಳಗೆ ಈ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಪ್ರಿಲ್ ತಿಂಗಳಲ್ಲಿ ಸುತ್ತೋಲೆ ಹೊರಡಿಸಿತ್ತು.
‘ನಿರ್ಬಂಧ ವಿಧಿಸುವುದರಿಂದ ಭಾರತದಲ್ಲಿ ವಹಿವಾಟು ನಡೆಸುವ ಕಂಪನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಭಾರತದ ಆರ್ಥಿಕ ಬೆಳವಣಿಗೆಯೂ ಕುಗ್ಗುತ್ತದೆ’ ಎಂದು ಸೆನೆಟರ್‌ಗಳಾದ ಜಾನ್ ಕಾರ್ನಿನ್ ಮತ್ತು ಮಾರ್ಕ್ ವಾರ್ನರ್ ತಿಳಿಸಿದ್ದಾರೆ. ಕಾರ್ನಿನ್ ರಿಪಬ್ಲಿಕನ್ ಪಕ್ಷದವರಾಗಿದ್ದು, ವಾರ್ನರ್ ಡೆಮಾಕ್ರಟಿಕ್ ಪಕ್ಷದವರಾಗಿದ್ದಾರೆ.
‘ಕಂಪನಿಗಳು ಉನ್ನತ ಮಟ್ಟದ ಖಾಸಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವುದರಿಂದ ದತ್ತಾಂಶಕ್ಕೆ ಗಡಿ ನಿರ್ಬಂಧ ವಿಧಿಸುವುದಕ್ಕೆ ಅರ್ಥ ಇಲ್ಲ. ಬದಲಾಗಿ, ದತ್ತಾಂಶ ಭದ್ರತೆಗೆ ಹಾನಿಯಾಗುವ ಜತೆಗೆ ಉದ್ಯಮಕ್ಕೆ ಮತ್ತು ಗ್ರಾಹಕರಿಗೆ ಅನಾನುಕೂಲಗಳನ್ನು ಸೃಷ್ಟಿಸುತ್ತದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಆರ್‌ಬಿಐ ಸುತ್ತೋಲೆಗೆ ಪ್ರಮುಖ ಅಮೆರಿಕ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಸೆನೆಟರ್‌ಗಳು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
‘ದತ್ತಾಂಶ ಸೀಮಿತಗೊಳಿಸುವುದನ್ನು ನಿಷೇಧಗೊಳಿಸಲು ಅಮೆರಿಕ ಬಯಸುತ್ತದೆ. ಇದರಿಂದ ಯಾವುದೇ ರೀತಿಯ ಗಡಿಗಳ ನಿರ್ಬಂಧವಿಲ್ಲದೆ ಮಾಹಿತಿ ಸರಾಗವಾಗಿ ವಿನಿಮಯವಾಗಬೇಕು’ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ಮತ್ತು ವಿಶ್ವವಾಣಿಜ್ಯ ಸಂಸ್ಥೆ ರಾಯಭಾರಿ ಡೆನ್ನಿಸ್ ಶಿಯಾ ಸಹ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.