ADVERTISEMENT

ಚೀನಾದ ಬೇಹುಗಾರಿಕಾ ಬಲೂನ್ ಹೊಡೆದು ಹಾಕಿದ ಅಮೆರಿಕ

ಪಿಟಿಐ
Published 5 ಫೆಬ್ರುವರಿ 2023, 14:19 IST
Last Updated 5 ಫೆಬ್ರುವರಿ 2023, 14:19 IST
ಫೈಟರ್‌ ಜೆಟ್‌ ಹಾರಿಸಿದ ಗುಂಡು ತಗುಲಿ ಛಿದ್ರವಾದ ಬಲೂನ್‌ – ರಾಯಿಟರ್ಸ್‌ ಚಿತ್ರ
ಫೈಟರ್‌ ಜೆಟ್‌ ಹಾರಿಸಿದ ಗುಂಡು ತಗುಲಿ ಛಿದ್ರವಾದ ಬಲೂನ್‌ – ರಾಯಿಟರ್ಸ್‌ ಚಿತ್ರ    

ವಾಷಿಂಗ್ಟನ್/ಬೀಜಿಂಗ್: ಅಮೆರಿಕದ ವಾಯುಗಡಿಯ ಅಟ್ಲಾಂಟಿಕಾ ಸಮುದ್ರ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ, ಚೀನಾದ ಶಂಕಿತ ಕಣ್ಗಾವಲು ಬಲೂನ್ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ. ಅಲ್ಲದೆ, ಬಲೂನ್‌ನ ಎಲ್ಲ ಅವಶೇಷಗಳ ಪತ್ತೆಗೆ ಸೇನೆಯ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನೊಂದೆಡೆ, ಈ ಬೆಳವಣಿಗೆಗೆ ಚೀನಾ ಕಟುವಾಗಿ ಪ್ರತಿಕ್ರಿಯಿಸಿದೆ. ‘ಚೀನಾದ ಮಾನವರಹಿತ ಏರ್‌ಶಿಪ್ ವಿರುದ್ಧ ಅಮೆರಿಕ ಸೇನೆಯನ್ನು ಬಳಸಿದೆ. ಇದರ ಪರಿಣಾಮಗಳನ್ನು ಎದುರಿಬೇಕಾದಿತು’ ಎಂದು ಎಚ್ಚರಿಕೆಯನ್ನು ನೀಡಿದೆ.

ಅಧ್ಯಕ್ಷ ಜೋ ಬೈಡನ್‌ ಅವರ ನಿರ್ದೇಶನದಂತೆ ಅಮೆರಿಕ ಸೇನೆಯು ಸ್ಥಳೀಯ ಕಾಲಮಾನ ಮಧ್ಯಾಹ್ನ 2.39ರಲ್ಲಿ, ಶಂಕಿತ ಕಣ್ಗಾವಲು ಬಲೂನ್‌ ಅನ್ನು ನಾರ್ಥ್ ಕೆರೊಲಿನಾ ಕಡಲತೀರದಲ್ಲಿ ಹೊಡೆದುರುಳಿಸಿತು. ಯಾವುದೇ ಜೀವ, ಆಸ್ತಿ ಹಾನಿಯಾಗಿಲ್ಲ. ಶಂಕಿತ ಬಲೂನ್‌ ಗುರಿಯಾಗಿಸಿ ವರ್ಜೀನಿಯಾದ ವಾಯುನೆಲೆಯಿಂದ ಕ್ಷಿಪಣಿ ಉಡಾವಣೆ ಮಾಡಿದ್ದು, ಅವಶೇಷಗಳು ಅಮೆರಿಕ ಭೂವ್ಯಾಪ್ತಿಯಲ್ಲೇ ಬಿದ್ದವು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಬುಧವಾರವಷ್ಟೇ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಎಷ್ಟು ಸಾಧ್ಯವೋ ಅಷ್ಟು ಬೇಗ ಅದನ್ನು ಹೊಡೆದುರುಳಿಸುವಂತೆ ನಾನೇ ಸೂಚಿಸಿದ್ದೆ’ ಎಂದು ಜೋ ಬೈಡನ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಬೆಳವಣಿಗೆಗೆ ಚೀನಾ ತೀವ್ರ ಬೇಸರ ವ್ಯಕ್ತಪಡಿಸಿದೆ. ‘ಚೀನಾದ ಮಾನವರಹಿತ ಏರ್‌ಶಿಪ್‌ ನಾಶಕ್ಕೆ ಅಮೆರಿಕ ಸೇನಾಬಲವನ್ನು ಬಳಸಿದೆ. ಅದು, ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾದುದು‘ ಎಂದು ಟೀಕಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

‘ಸಂಬಂಧಿತ ಕಂಪನಿಯ ಶಾಸನಬದ್ಧ ಹಕ್ಕು, ಹಿತಾಸಕ್ತಿಯನ್ನು ಚೀನಾ ರಕ್ಷಿಸಲಿದೆ. ಅಲ್ಲದೆ, ಪ್ರತಿಕ್ರಿಯಾತ್ಮಕವಾಗಿ ಅನುಸರಿಸಬೇಕಾದ ಹಕ್ಕನ್ನು ಕಾಯ್ದುಕೊಳ್ಳಲಿದೆ’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಉಲ್ಲೇಖಿತ ಏರ್‌ಶಿಪ್‌ ಅನ್ನು ಹವಾಮಾನ ಅಧ್ಯಯನಕ್ಕಾಗಿ ಹಾರಿಬಿಡಲಾಗಿತ್ತು ಎಂದೂ ಚೀನಾ ಪ್ರತಿಪಾದಿಸಿದೆ.

‘ಪರಿಶೀಲನೆಯ ಬಳಿಕ ‘ಇದು ನಾಗರಿಕ ಉದ್ದೇಶದ ಏರ್‌ಶಿಪ್‌. ಅಮೆರಿಕದ ವಾಯುಗಡಿಗೆ ಆಕಸ್ಮಿಕವಾಗಿ ಪ್ರವೇಶಿಸಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿತ್ತು. ಅಲ್ಲದೆ, ಒಟ್ಟು ಪರಿಸ್ಥಿತಿಯನ್ನು ಶಾಂತವಾಗಿ, ವೃತ್ತಿಪರ ಧೋರಣೆಯಂತೆ ನಿಭಾಯಿಸುವಂತೆಯೂ ಎಂದು ಕೋರಲಾಗಿತ್ತು‘ ಎಂದು ಹೇಳಿಕೆಯು ತಿಳಿಸಿದೆ.

ಬೈಡನ್ ಅವರ ನಿರ್ದೇಶನದಂತೆ ಶಂಕಿತ ಕಣ್ಗಾವಲು ಬಲೂನ್‌ ಅನ್ನು ಕ್ಷಿಪಣಿ ಪ್ರಯೋಗಿಸಿ ಉರುಳಿಸಲಾಗಿದೆ. ಇದನ್ನು ಚೀನಾದಿಂದ ಉಡಾವಣೆ ಮಾಡಲಾಗಿತ್ತು. ಅಮೆರಿಕ ವಾಯುಗಡಿಯ ನಾರ್ಥ್‌ ಕೆರೊಲಿನಾದ ಕಡಲತೀರ ವ್ಯಾಪ್ತಿಯಲ್ಲಿ ಹಾರಾಟ ನಡೆಸಿತ್ತು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.