ವಾಷಿಂಗ್ಟನ್: ಒಂದು ತಿಂಗಳ ಸತತ ಚರ್ಚೆಯ ಬಳಿಕ ಅಮೆರಿಕದ ಅಲಬಾಮ ರಾಜ್ಯದಲ್ಲಿ ಯೋಗ ಆಚರಣೆ ಮೇಲೆ ದಶಕಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಆದರೆ ‘ನಮಸ್ತೆ’ ಬಳಕೆಯನ್ನು ನಿರ್ಬಂಧಿಸಿದೆ.
ಕೊರೊನಾ ವೈರಸ್ ಸೋಂಕು ಪ್ರಪಂಚದಾದ್ಯಂತ ಹರಡುತ್ತಿದ್ದು, ವಿಶ್ವನಾಯಕರು ಪರಸ್ಪರ ಕೈಕುಲುಕುವ ಬದಲು ಕೈಮುಗಿದು ನಮಸ್ಕಾರ ಹೇಳಲು ಶುರು ಮಾಡಿದ್ದಾರೆ. ಈ ಹೊತ್ತಿನಲ್ಲಿ ನಮಸ್ತೆಗೆ ಜನಪ್ರತಿನಿಧಿ ಸಭೆ ಅನುಮೋದನೆ ನೀಡಿಲ್ಲ.
1993ರಲ್ಲಿ ಅಲಬಾಮ ಶಿಕ್ಷಣ ಮಂಡಳಿಯು ರಾಜ್ಯದ ಸರ್ಕಾರಿ ಶಾಲೆಗಳಲ್ಲಿಯೋಗ, ಧ್ಯಾನ ಹಾಗೂ ಸಮ್ಮೋಹನಗಳನ್ನು ನಿರ್ಬಂಧಿಸಿತ್ತು. ಡೆಮಾಕ್ರಟಿಕ್ ಪಕ್ಷದ ಜೆರ್ಮಿ ಗ್ರೇ ಅವರು ಮಂಡಿಸಿದ ‘ಯೋಗ ಮಸೂದೆ’ಗೆ ಅಲಬಾಮ ಜನಪ್ರತಿನಿಧಿ ಸಭೆಯು ಮಂಗಳವಾರ 84–17 ಮತಗಳಿಂದ ಅನುಮೋದನೆ ನೀಡಿತು.
ಮಸೂದೆಗೆ ಗವರ್ನರ್ ಕೇ ಐವೇ ಅವರು ಸಹಿ ಹಾಕಿದರೆ, ಯೋಗ ಆಚರಣೆ ಮೇಲಿದ್ದ 27 ವರ್ಷಗಳ ನಿರ್ಬಂಧ ಕೊನೆಗೊಳ್ಳಲಿದೆ. ತಿದ್ದುಪಡಿ ಕಾಯ್ದೆಯ ಪ್ರಕಾರ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಬಹುದು.
ಮಸೂದೆಯನ್ನು ವಿರೋಧಿಸಿದ್ದ ಕ್ರಿಶ್ಚಿಯನ್ ಸಮುದಾಯದ ಗುಂಪುಗಳು, ಇದರಿಂದ ಶಾಲೆಗಳಲ್ಲಿ ಹಿಂದೂ ಧರ್ಮವನ್ನು ಪರಿಚಯಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.