ಯೆಮೆನ್: ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದೋಣಿಗಳಿಂದ ದಾಳಿ ನಡೆಸುತ್ತಿದ್ದ ಇರಾನ್ ಬೆಂಬಲಿತ 10 ಹುತಿ ಬಂಡುಕೋರರನ್ನು ನೌಕಾಪಡೆಯ ಹೆಲಿಕಾಪ್ಟರ್‌ನಿಂದ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ ಎಂದು ಅಮೆರಿಕ ಸೇನೆ ಭಾನುವಾರ ತಿಳಿಸಿದೆ.
ಸಿಂಗಪುರ ಧ್ವಜದ, ಡೆನ್ಮಾರ್ಕ್ ಒಡೆತನದ ಮಾರ್ಸ್ಕ್ ಹ್ಯಾಂಗ್‌ಝೌ ಹೆಸರಿನ ಕಂಟೈನರ್ ಹಡಗಿನಿಂದ ತುರ್ತು ನೆರವಿನ ಕರೆ ನೌಕಾಪಡೆಗೆ ಬಂದಿತ್ತು. ಕೆಂಪು ಸಮುದ್ರದಲ್ಲಿ ಸಾಗುವಾಗ ಈ ಹಡಗು 24 ತಾಸುಗಳಲ್ಲಿ ಎರಡನೇ ಬಾರಿಗೆ ದಾಳಿಗೆ ತುತ್ತಾಗಿತ್ತು. ಈ ಹಡಗು ಮೊದಲು ಎರಡು ಹಡಗು ಧ್ವಂಸಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಗುರಿಯಾಗಿದ್ದು, ಇದರಲ್ಲಿ ಒಂದನ್ನು ಅಮೆರಿಕ ಸೇನೆ ಹೊಡೆದುರುಳಿಸಿತ್ತು. ಇನ್ನೊಂದು ಕ್ಷಿಪಣಿ ಹಡಗಿಗೆ ಅಪ್ಪಳಿಸಿತ್ತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ನೆರವಿಗೆ ಧಾವಿಸಿದ ಅಮೆರಿಕದ ಹೆಲಿಕಾಪ್ಟರ್‌ನತ್ತಲೂ ಹಡಗಿಗೆ 20 ಮೀಟರ್ ಹತ್ತಿರದಲ್ಲಿದ್ದ ದೋಣಿಗಳಿಂದ ಹುತಿ ಬಂಡುಕೋರರು ಗುಂಡು ಹಾರಿಸಿದರು. ಆಗ ಸ್ವರಕ್ಷಣೆಗೆ ಹೆಲಿಕಾಪ್ಟರ್‌ನಿಂದ ಸ್ವಯಂಚಾಲಿತ ಗುಂಡು ಹಾರಿಸಿದಾಗ ಮೂರು ದೋಣಿಗಳು ಮುಳುಗಿವೆ. ಮೂರು ದೋಣಿಗಳಲ್ಲಿದ್ದ ಬಂಡುಕೋರರು ಹತರಾಗಿದ್ದಾರೆ. ಒಂದು ದೋಣಿ ತಪ್ಪಿಸಿಕೊಂಡಿದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.