ವಾಷಿಂಗ್ಟನ್: ಉಕ್ರೇನ್ ವಿಚಾರಕ್ಕೆ ಸಂಬಂಧಿಸಿ ಅಮೆರಿಕವು ಭಾರತದ ಜತೆ ಮಾತುಕತೆ ನಡೆಸುತ್ತಿದೆ. ಜಪಾನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿಯೂ ಇದು ಮುಂದುವರಿಯಲಿದೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಿಸಾಕಿ ಹೇಳಿದ್ದಾರೆ.
ಕ್ವಾಡ್ ಶೃಂಗಸಭೆಯಲ್ಲಿ ಉಕ್ರೇನ್ ವಿಚಾರ ಚರ್ಚೆಯಾಗಲಿದೆಯೇ ಎಂಬ ಕುರಿತು ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
‘ರಷ್ಯಾ ಮೇಲೆ ಹಲವು ನಿರ್ಬಂಧಗಳ ಹೇರಿಕೆ ಹಾಗೂ ಉಕ್ರೇನ್‌ಗೆ ನೆರವು ನೀಡುವ ಮೂಲಕ ನಾವು ಆ ದೇಶಕ್ಕೆ ಬೆಂಬಲವಾಗಿ ನಿಂತಿದ್ದೇವೆ. ಈ ಯುದ್ಧದಲ್ಲಿ ಉಕ್ರೇನ್ ಅನ್ನು ಬೆಂಬಲಿಸುವ ವಿಚಾರವಾಗಿ ಭಾರತದ ನಾಯಕರ ಜತೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದೇವೆ. ಮುಂಬರುವ ಸಭೆಯಲ್ಲೂ ಇದನ್ನು ಮುಂದುವರಿಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಜಪಾನ್, ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿದ್ದು, ಈ ದೇಶಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ಈಗಾಗಲೇ ತಿಳಿಸಿದೆ.
‘ಕ್ವಾಡ್ ಶೃಂಗಸಭೆಗೆ ಕೆಲವು ವಾರಗಳಿವೆ. ಅಷ್ಟರಲ್ಲಿ ನಿಶ್ಚಿತವಾಗಿಯೂ ಹಲವು ಬೆಳವಣಿಗೆಗಳು ಆಗಬಹುದು. ಕ್ವಾಡ್‌ನ ಇತರ ಸದಸ್ಯ ರಾಷ್ಟ್ರಗಳು ಯುದ್ಧದ ವಿಚಾರದಲ್ಲಿ ಉಕ್ರೇನ್ ಪರವಾಗಿ ಇರುವುದು ನಿಮಗೆ ತಿಳಿದಿದೆ’ ಎಂದು ಪಿಸಾಕಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.