ವಾಷಿಂಗ್ಟನ್: ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ, ಆಫ್ರಿಕಾ ಒಕ್ಕೂಟಕ್ಕೆ ಫೈಜರ್ ಕಂಪನಿಯ ಕೋವಿಡ್ ಲಸಿಕೆಯ 50 ಕೋಟಿ ಡೋಸ್‌ಗಳನ್ನು ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ.
ಬ್ರಿಟನ್‌ನಲ್ಲಿ ಆಯೋಜನೆಯಾಗಿರುವ ಜಿ–7 ಶೃಂಗಸಭೆಯಲ್ಲಿ ಬೈಡನ್ ಅವರಿಂದ ಈ ಕುರಿತು ಘೋಷಣೆ ಹೊರಬೀಳಲಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
ಆಗಸ್ಟ್‌ನಲ್ಲಿ ಲಸಿಕೆ ಪೂರೈಕೆಗೆ ಚಾಲನೆ ನೀಡಲಾಗುತ್ತದೆ. ಈ ವರ್ಷಾಂತ್ಯಕ್ಕೆ 20 ಕೋಟಿ ಡೋಸ್ ಪೂರೈಸಲಾಗುವುದು. ಉಳಿದ 30 ಕೋಟಿ ಡೋಸ್‌ಗಳನ್ನು ಮುಂದಿನ ವರ್ಷದ ಮೊದಲಾರ್ಧದ ವೇಳೆಗೆ ಪೂರೈಸಲಾಗುವುದು ಎಂದು ತಿಳಿಸಿದೆ.
ವಿವಿಧ ದೇಶಗಳಿಗೆ ಉಚಿತವಾಗಿ ನೀಡುವ ಸಂಬಂಧ ಒಂದು ದೇಶ ಈವರೆಗೆ ಮಾಡಲಿರುವ ಗರಿಷ್ಠ ಪ್ರಮಾಣದ ಲಸಿಕೆಯ ಖರೀದಿ ಇದಾಗಿದೆ. ಇದು ಕೋವಿಡ್–19 ನಿಂದ ವಿವಿಧ ರಾಷ್ಟ್ರಗಳ ಜನರನ್ನು ರಕ್ಷಿಸುವುದಕ್ಕೆ ಸಂಬಂಧಿಸಿ ಅಮೆರಿಕದ ಜನತೆಯ ಬದ್ಧತೆಯನ್ನು ತೋರುತ್ತದೆ ಎಂದೂ ಶ್ವೇತಭವನ ಹೇಳಿದೆ.
‘ಬಡ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ಪೂರೈಸುವ ಈ ಕಾರ್ಯದಲ್ಲಿ ಕೈಜೋಡಿಸುವಂತೆ ವಿಶ್ವದ ವಿವಿಧ ದೇಶಗಳಿಗೆ ಬೈಡನ್ ಅವರು ಶೃಂಗಸಭೆಯಲ್ಲಿ ಮನವಿ ಮಾಡಲಿದ್ದಾರೆ. ಕೋವಿಡ್ ಪಿಡುಗನ್ನು ನಿರ್ಮೂಲನೆ ಮಾಡಿ, ಅಮೂಲ್ಯ ಜೀವಗಳನ್ನು ಉಳಿಸುವುದೇ ಲಸಿಕೆಯನ್ನು ಉಚಿತವಾಗಿ ನೀಡುವ ಉದ್ದೇಶವಾಗಿದೆ’ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.