ವಾಷಿಂಗ್ಟನ್, ಕಾಬೂಲ್: ಅಫ್ಗಾನಿಸ್ತಾನದಿಂದ ತನ್ನ ಮತ್ತು ಮಿತ್ರ ರಾಷ್ಟ್ರಗಳ ನಾಗರಿಕರು ಸುರಕ್ಷಿತವಾಗಿ ಸ್ವದೇಶಕ್ಕೆ ತೆರಳುವಂತೆ ಅನುಕೂಲ ಕಲ್ಪಿಸಲು ಅಮೆರಿಕ ಆರು ಸಾವಿರ ಯೋಧರನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲು ನಿರ್ಧರಿಸಿದೆ.
ತಾಲಿಬಾನ್ ಈಗ ಅಫ್ಗಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಅಮೆರಿಕ ಈ ಕ್ರಮಕೈಗೊಂಡಿದೆ.
‘ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ನಾಗರಿಕರನ್ನು ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕಳುಹಿಸಲು ಆದ್ಯತೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ ಸಂಚಾರ ನಿಯಂತ್ರಣ ವ್ಯವಸ್ಥೆಯ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಲಾಗಿದೆ’ ಎಂದು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಇಲಾಖೆಗಳು ಜಂಟಿ ಹೇಳಿಕೆ ನೀಡಿವೆ.
‘ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಉದ್ಯೋಗ ಪಡೆದಿದ್ದ ಸ್ಥಳೀಯ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸೇರಿದಂತೆ ಸಾವಿರಾರು ಅಮೆರಿಕನ್ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲಾಗುವುದು. ಜತೆಗೆ, ಅಮೆರಿಕದ ವಿಶೇಷ ವಲಸೆ ವೀಸಾ ಪಡೆಯಲು ಅರ್ಹರಾಗಿರುವ ಅಫ್ಗಾನಿಸ್ತಾನದ ನಾಗರಿಕರನ್ನು ಸಹ ಅಮೆರಿಕಕ್ಕೆ ಕರೆಸಿಕೊಳ್ಳಲಾಗುವುದು. ಕಳೆದ ಎರಡು ವಾರಗಳಲ್ಲಿ ಇದೇ ರೀತಿ ಎರಡು ಸಾವಿರ ಮಂದಿ ಅಮೆರಿಕಕ್ಕೆ ಬಂದಿದ್ದಾರೆ’ ಎಂದು ತಿಳಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಪ್ರಮುಖ ಮಿತ್ರ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಆದರೆ, ಭಾರತದ ವಿದೇಶಾಂಗ ಸಚಿವರ ಮಾತುಕತೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಿಲ್ಲ. ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರಿದ್ದರಿಂದ ಗದ್ದಲ ಮತ್ತು ಗೊಂದಲ ಉಂಟಾಗಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ. ಅಫ್ಗಾನಿಸ್ತಾನದಿಂದ ತೆರಳಲು ಈ ವಿಮಾನ ನಿಲ್ದಾಣದಿಂದ ಮಾತ್ರ ಅವಕಾಶವಿದೆ.
‘ಲೂಟಿ ತಡೆಯಲು ವಾಣಿಜ್ಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಯಾರೂ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬಾರದು’ ಎಂದು ವಿಮಾನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಜೆಕ್‌ಗೆ ಬಂದಿಳಿದ ಮೊದಲ ವಿಮಾನ: ಕಾಬೂಲ್ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಜೆಕ್ ಗಣರಾಜ್ಯದ ಮೊದಲ ವಿಮಾನವು ಸೋಮವಾರ ರಾಜಧಾನಿ ಪ್ರಾಗ್‌ಗೆ ಬಂದಿಳಿದಿದೆ.
ಈ ವಿಮಾನದ ಮೂಲಕ 46 ಮಂದಿ ಸ್ವದೇಶಕ್ಕೆ ಬಂದಿದ್ದಾರೆ ಎಂದು ಪ್ರಧಾನಿ ಆಂದ್ರೆಜ್ ಬಾಬಿಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.